ಲಂಕಾ-ಬಾಂಗ್ಲಾ ಮೊದಲ ಟೆಸ್ಟ್ ಡ್ರಾ

Update: 2018-02-04 18:32 GMT

ಚಿತ್ತಗಾಂಗ್(ಬಾಂಗ್ಲಾದೇಶ), ಫೆ.4: ಆತಿಥೇಯ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಲು ಯಶಸ್ವಿಯಾಗಿದೆ. ಮೊಮಿನುಲ್ ಹಕ್ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಾಂಗ್ಲಾದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಮೊದಲ ಇನಿಂಗ್ಸ್‌ನಲ್ಲಿ 176 ರನ್ ಗಳಿಸಿದ್ದ ಮೊಮಿನುಲ್ ಎರಡನೇ ಇನಿಂಗ್ಸ್‌ನಲ್ಲಿ 174 ಎಸೆತಗಳಲ್ಲಿ 105 ರನ್ ಗಳಿಸಿದರು. ಐದನೇ ಹಾಗೂ ಅಂತಿಮ ದಿನವಾದ ರವಿವಾರ ಆಟ ಕೊನೆಗೊಳ್ಳಲು 1 ಗಂಟೆ ಬಾಕಿ ಇರುವಾಗ ಉಭಯ ತಂಡಗಳು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದವು. ಪಂದ್ಯ ಡ್ರಾನಲ್ಲಿ ಕೊನೆಗೊಂಡಾಗ ಬಾಂಗ್ಲಾದೇಶ 5 ವಿಕೆಟ್‌ಗಳ ನಷ್ಟಕ್ಕೆ 307 ರನ್ ಗಳಿಸಿತ್ತು. ನಾಯಕ ಮಹ್ಮದುಲ್ಲಾ(ಔಟಾಗದೆ 28) ಮೊಸಾಡೆಕ್ ಹುಸೈನ್(ಅಜೇಯ 8) ಅವರೊಂದಿಗೆ ಕ್ರೀಸ್ ಕಾಯ್ದುಕೊಂಡರು.

 ಮೊದಲ ಟೆಸ್ಟ್‌ನಲ್ಲಿ ರನ್ ಮಳೆ ಹರಿದಿತ್ತು. ಬಾಂಗ್ಲಾದೇಶ ಮೊದಲ ಇನಿಂಗ್ಸ್ ನಲ್ಲಿ 513 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ 9 ವಿಕೆಟ್‌ಗೆ 713 ರನ್ ಗಳಿಸಿದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 200 ರನ್ ಮುನ್ನಡೆ ಪಡೆದಿತ್ತು. 4ನೇ ದಿನವಾದ ಶನಿವಾರ ದಿನದಾಟದಂತ್ಯಕ್ಕೆ ಹಿರಿಯ ಸ್ಪಿನ್ನರ್ ರಂಗನ ಹೆರಾತ್ ಅವರು ಮುಶ್ಫಿಕುರ್ರಹೀಂ ವಿಕೆಟ್ ಉರುಳಿಸಿದಾಗ ಶ್ರೀಲಂಕಾದ ಗೆಲುವಿನ ಅವಕಾಶ ಹೆಚ್ಚಾಗಿತ್ತು. ಔಟಾಗದೆ 18 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮೊಮಿನುಲ್ ಹಾಗೂ ಲಿಟನ್ ದಾಸ್(94)4ನೇ ವಿಕೆಟ್‌ಗೆ ನಿರ್ಣಾಯಕ 180 ರನ್ ಜೊತೆಯಾಟ ನಡೆಸಿ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. ಎಡಗೈ ದಾಂಡಿಗ ಮೊಮಿನುಲ್ ಎರಡನೇ ಶತಕ ಗಳಿಸಿದ ಬೆನ್ನಿಗೆ ಧನಂಜಯ ಡಿಸಿಲ್ವಾಗೆ ವಿಕೆಟ್ ಒಪ್ಪಿಸಿದರು.

89 ರನ್ ಗಳಿಸಿದಾಗ ಜೀವದಾನ ಪಡೆದ ಮೊಮಿನುಲ್ 174 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳ ಸಹಿತ 105 ರನ್ ಗಳಿಸಿದ್ದಾರೆ. ಸತತ ಎರಡನೇ ಶತಕ ಸಿಡಿಸಿರುವ ಮೊಮಿನುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದರು. ಲಿಟನ್ ದಾಸ್ ಅವರು ಹೆರಾತ್ ಎಸೆತದಲ್ಲಿ ದಿಲ್‌ರುವಾನ್ ಪೆರೇರ ಪಡೆದ ಅದ್ಭುತ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿ ಚೊಚ್ಚಲ ಶತಕ ವಂಚಿತರಾದರು. 182 ಎಸೆತಗಳನ್ನು ಎದುರಿಸಿರುವ ದಾಸ್ 11 ಬೌಂಡರಿ ಬಾರಿಸಿದ್ದಾರೆ. ಶ್ರೀಲಂಕಾದ ಹೆರಾತ್(2-80) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಎರಡನೇ ಹಾಗೂ ಫೈನಲ್ ಟೆಸ್ಟ್ ಪಂದ್ಯ ಫೆ.8 ರಂದು ಢಾಕಾದಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News