ಬೆಳ್ಳಿಗೆ ತೃಪ್ತಿಪಟ್ಟ ಪಿ.ವಿ. ಸಿಂಧು

Update: 2018-02-04 18:50 GMT

ಹೊಸದಿಲ್ಲಿ, ಫೆ.4: ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

ರವಿವಾರ ಇಲ್ಲಿನ ಸಿರಿ ಫೋರ್ಟ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ವಿಶ್ವದ ನಂ.11ನೇ ಆಟಗಾರ್ತಿ ಬೆವೆನ್ ಝಾಂಗ್ ವಿರುದ್ಧ 18-21, 21-11, 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಅಮೆರಿಕದ 5ನೇ ಶ್ರೇಯಾಂಕದ ಆಟಗಾರ್ತಿ ಝಾಂಗ್ ವೃತ್ತಿಜೀವನದಲ್ಲಿ ಮೊದಲ ಬಾರಿ ಪ್ರಮುಖ ಪ್ರಶಸ್ತಿ ಗೆದ್ದುಕೊಂಡರು.

 ಮೊದಲ ಗೇಮ್‌ನ ಆರಂಭದಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಒಂದು ಹಂತದಲ್ಲಿ ಸಿಂಧು 11-9 ಮುನ್ನಡೆಯಲ್ಲಿದ್ದರು. ಅಗ್ರ ಶ್ರೇಯಾಂಕದ ಸಿಂಧು 15-14 ಮುನ್ನಡೆಯಲ್ಲಿದ್ದಾಗ ತಿರುಗೇಟು ನೀಡಿದ ಝಾಂಗ್ 22 ನಿಮಿಷಗಳಲ್ಲಿ ಮೊದಲ ಗೇಮ್‌ನ್ನು 21-18 ಅಂತರದಿಂದ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಉಭಯ ಆಟಗಾರ್ತಿಯರ ನಡುವೆ ಮತ್ತೊಮ್ಮೆ ಪೈಪೋಟಿ ಕಂಡುಬಂತು. ಸಿಂಧು ಎರಡನೇ ಗೇಮ್‌ನ್ನು 21-11ರಿಂದ ಗೆದ್ದುಕೊಳ್ಳುವ ಮೂಲಕ ಸಮಬಲ ಸಾಧಿಸಿದರು.

 3ನೇ ಗೇಮ್‌ನ ಆರಂಭದಲ್ಲಿ ಸಿಂಧು 2-0 ಮುನ್ನಡೆ ಪಡೆದರು. ಪ್ರತಿಹೋರಾಟ ನೀಡಿದ ಝಾಂಗ್ 3-3ರಿಂದ ಸಮಬಲಗೊಳಿಸಿದರು. ಸತತ 6 ಅಂಕ ಗಳಿಸಿದ ಅಮೆರಿಕ ಆಟಗಾರ್ತಿ 9-4 ಮುನ್ನಡೆ ಪಡೆದರು. ಮತ್ತೊಮ್ಮೆ ಸತತ 3 ಅಂಕ ಗಳಿಸಿದ ಝಾಂಗ್ 17-15 ಮುನ್ನಡೆ ಪಡೆದರು. ಅತ್ಯಂತ ಪ್ರಮುಖ ಮ್ಯಾಚ್ ಪಾಯಿಂಟ್ ಪಡೆದ ಝಾಂಗ್ ಅಂತಿಮವಾಗಿ ಮೂರನೇ ಗೇಮ್‌ನ್ನು 22-20 ರಿಂದ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News