ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಆಗ್ರಹಿಸಿ ವಕೀಲರಿಂದ ಉಪವಾಸ ಸತ್ಯಾಗ್ರಹ

Update: 2018-02-05 15:17 GMT

ಬೆಂಗಳೂರು, ಫೆ.5: ಹೈಕೋರ್ಟ್‌ನಲ್ಲಿ ಖಾಲಿ ಇರುವ 38 ನ್ಯಾಯಮೂರ್ತಿಗಳ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ವಕೀಲರು ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ವಿರುದ್ಧ ಸೋಮವಾರ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ಎಎಜಿ ಪೊನ್ನಣ್ಣ, ಅಮೃತೇಶ್ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದು, ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡದಿದ್ದರೆ ವಾರ ಪೂರ್ತಿ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಹೇಳಿದ್ದಾರೆ.

ಒಂದು ವಾರದ ನಂತರವೂ ಸಮಸ್ಯೆ ಪರಿಹರಿಸದಿದ್ದರೆ ಹೊಸದಿಲ್ಲಿಯ ಸಂಸತ್ ಭವನದ ಮುಂದೆ ಧರಣಿ ನಡೆಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ವಕೀಲರ ಪ್ರತಿಭಟನಾ ಸ್ಥಳ್ಕಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ. ಬಿ. ಜಯಚಂದ್ರ ಭೇಟಿ ನೀಡಿದ್ದು, ಕೇಂದ್ರ ಸರಕಾರ ನ್ಯಾಯಾಧೀಶರ ನೇಮಕದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಿ ಮತ್ತು ಕಾನೂನು ಸಚಿವರನ್ನು ಭೇಟಿ ಮಾಡಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರತಿಭಟನಾ ಸ್ಥಳ್ಕಕೆ ಸಿಎಂ ಭೇಟಿ ನೀಡಿದ ಬಳಿಕ ಆಗಮಿಸಿದ ಕೇಂದ್ರ ಸಚಿವ ಸದಾನಂದಗೌಡ, ನ್ಯಾಯಮೂರ್ತಿಗಳ ನೇಮಕಕ್ಕೆ ಒತ್ತಾಯಿಸಿ ವಕೀಲರು ಪ್ರತಿಭಟನಾ ನಡೆಸುವಂತಹ ಸ್ಥಿತಿ ಬಂದಿರುವುದು ವಿಷಾದಕರ. ಪ್ರತಿಭಟನೆ ಹಿಂಪಡೆಯಿರಿ. ಸಂಬಂಧಪಟ್ಟವರ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ನಾನು ಕಾನೂನು ಸಚಿವನಾಗಿದ್ದಾಗ 10 ಹೆಸರು ಬಂದಿದ್ದವು. ಐದು ಹೆಸರುಗಳಿಗೆ ರಾಜ್ಯ ಸರಕಾರ ತಕರಾರು ತೆಗೆದಿತ್ತು. ರಾಜ್ಯದ ನ್ಯಾಯಮೂರ್ತಿಗಳೂ ಆಕ್ಷೇಪ ಎತ್ತಿದ್ದರು ಎಂದು ಸದಾನಂದಗೌಡ ಹೇಳಿದರು.

ಹಿರಿಯ ವಕೀಲ ಬಿ.ವಿ.ಆಚಾರ್ಯ ಮಾತನಾಡಿ, ಹೈಕೋರ್ಟ್‌ನಲ್ಲಿ 3 ಲಕ್ಷ ಪ್ರಕರಣಗಳು ಬಾಕಿಯಿದ್ದು, ಇದರಿಂದ, ಈಗಿರುವ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಕರ್ನಾಟಕ ನ್ಯಾಯಾಲಯಕ್ಕೆ ಶೀಘ್ರವಾಗಿ ನ್ಯಾಯಮೂರ್ತಿಗಳನ್ನು ಭರ್ತಿ ಮಾಡಬೇಕು. ಕಳೆದ ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ 150 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಯಿತು. ಆದರೆ, ಅದರಲ್ಲಿ ರಾಜ್ಯಕ್ಕೆ ಕೇವಲ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಮೂರ್ತಿಗಳನ್ನು ಸ್ವಾಗತ ಮಾಡುವುದು ಮರೆತು ಹೋಗಿ ಬರೀ ಬೀಳ್ಕೊಡುಗೆ ನೀಡುವುದಾಗಿದೆ ಎಂದು ಹೇಳಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ತೀವ್ರ ಕೊರತೆಯಿದ್ದು, ಇದರಿಂದ, ಸಾಕಷ್ಟು ಪ್ರಕರಣಗಳು ಹಾಗೆಯೇ ಬಾಕಿ ಉಳಿದಿವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಸುರೇಶ್‌ಕುಮಾರ್ ವಕೀಲರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News