2018ರ ಬಜೆಟ್ : ಬಣ್ಣದ ತಗಡಿನ ತುತ್ತೂರಿ...

Update: 2018-02-05 18:30 GMT

ಗ್ರಾಮೀಣ ಭಾರತ ಮತ್ತು ರೈತರ ಹಿತಕಾಯುವ ಬಜೆಟ್ ಎಂದು ಹೇಳಿಕೊಳ್ಳಲಿಕ್ಕಾಗಿ ಅರುಣ್ ಜೇಟ್ಲಿ ತನ್ನ ಬಜೆಟ್ ಮಂಡಿಸುವಾಗ ಸ್ವಾಮಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸಿದರು. ‘‘ನೇಗಿಲನ್ನು ಹಿಡಿದು, ಬೆಸ್ತರ ಗುಡಿಸಲುಗಳಿಂದ, ರೈತರ ಗುಡಿಸಲುಗಳಿಂದ ಆಕೆ(ಭಾರತಮಾತೆ) ಎದ್ದೇಳಲಿ’’.

ಬಳಿಕ ದೂರದರ್ಶನಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಜೇಟ್ಲಿ ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ಕೃಷಿಯ ಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ಈ ರಂಗಗಳಿಗೆ ಸರಕಾರದ ಬೆಂಬಲದ ಅಗತ್ಯವಿದೆ ಎಂದರು.

ಆದರೂ ಈ ರಂಗಗಳಿಗೆ ಬಜೆಟ್‌ನಲ್ಲಿ ಅಂತಹ ಹೆಚ್ಚಿನ ಮೊತ್ತ ಮೀಸಲಿಟ್ಟಿರುವುದು ಕಾಣಿಸುವುದಿಲ್ಲ. ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ರಂಗಗಳಿಗೆ ಹಾಗೂ ಸಮಾಜದ ಕಲ್ಯಾಣ ಯೋಜನೆಗಳಿಗೆ ಬಜೆಟ್‌ನಲ್ಲಿ ಘೋಷಿಸಲಾಗಿರುವ ಮೊತ್ತಗಳ ಕಳೆದ ಕೆಲವು ವರ್ಷಗಳಲ್ಲಿ ಮೀಸಲಿಡಲಾದ ಮೊತ್ತಗಳ ಜಾಡಿನಲ್ಲೇ ಇವೆ.

ಉದಾಹರಣೆಗೆ: ಕೃಷಿಗೆ ಘೋಷಿಸಲಾದ ಮೊತ್ತದಲ್ಲಿ ಶೇ.12.8 ರಷ್ಟು ಹೆಚ್ಚಳ ಕಾಣಿಸುತ್ತದೆ. ಕಳೆದ ವರ್ಷ ಕೂಡ ಇಷ್ಟೇ ಹೆಚ್ಚಳ ಮಾಡಲಾಗಿತ್ತು. ಗ್ರಾಮೀಣ ರಂಗಕ್ಕೆ ಶೇ.1.8ರಷ್ಟು ಹೆಚ್ಚಳ ಮಾಡಲಾಗಿದೆ. ಕಳೆದ ಬಜೆಟ್ ನಲ್ಲಿ ಮಾಡಲಾದ ಶೇ.19 ಹೆಚ್ಚಳಕ್ಕಿಂತ ಇದು ತುಂಬಾ ಕಡಿಮೆ. ಅದೇ ರೀತಿಯಾಗಿ ಈ ಬಜೆಟ್‌ನಲ್ಲಿ ಸಾಮಾಜಿಕ ರಂಗದ ಯೋಜನೆಗಳಿಗೆ ಶೇ. 14.5 ಹೆಚ್ಚಳ ಮಾಡಲಾಗಿದೆ. 2016-17ರಲ್ಲಿ ಇದು ಶೇ.21.4 ಇತ್ತು.

ಹಣ ಎಲ್ಲಿದೆ?

 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈಗ ಇರುವ 55,000 ಕೋಟಿ ರೂ. ಮೊತ್ತವನ್ನು ಬಜೆಟ್ ನಲ್ಲಿ ಸರಕಾರ ಏರಿಸಿಲ್ಲ. ಅಲ್ಲದೆ, ಕಳೆದ ವರ್ಷಗಳಲ್ಲಿ ಕೊಡಲು ಬಾಕಿ ಇರುವ ದಿನಗೂಲಿಯ ಮೊತ್ತ ಇನ್ನೂ ಪಾವತಿಯಾಗದೆ ಉಳಿದಿದೆ. ಹಣದುಬ್ಬರವನ್ನು ಗಮನಿಸಿ ದಿನಗೂಲಿಯ ಮೊತ್ತವನ್ನು ಹೆಚ್ಚಿಸಬೇಕಾಗಿ ರುವಾಗ, ಈ ಯೋಜನೆಯ ಅನುಸಾರ ಸಿಗುವ ಕೆಲಸದ ಮೊತ್ತ ಕಳೆದ ವರ್ಷಕ್ಕಿಂತ ಕಡಿಮೆಯಾಗುತ್ತದೆ. ಇದರಿಂದಾಗಿ ಗ್ರಾಮೀಣ ಆದಾಯಗಳ ಮೇಲೆ ನೇತ್ಯಾತ್ಮಕ ಪರಿಣಾಮವಾಗುತ್ತದೆ. ಜೇಟ್ಲಿಯವರು ಬಜೆಟ್‌ನಲ್ಲಿ ಒಂದು ಫಿಶರೀಸ್ ಆ್ಯಂಡ್ ಅಕ್ವಾಕಲ್ಚರ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಫಂಡ್ ಹಾಗೂ ಅನಿಮಲ್ ಹಸ್ಬಂಡ್ರಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನಿಧಿಯನ್ನು ಸರಕಾರ 10,000 ಕೋಟಿ ರೂ. ನಿಧಿಯ ಮೊತ್ತದೊಂದಿಗೆ ಸೃಷ್ಟಿಸಲಿದೆ ಎಂದು ಪ್ರಕಟಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಇದಕ್ಕಾಗಿ ಮಂಜೂರಾಗಿರುವ ನಿಜವಾದ ಮೊತ್ತ ಕೇವಲ 47 ಕೋಟಿ ರೂ.

ಹಾಗೆಯೇ, ಸುಮಾರು 22,000 ಗ್ರಾಮೀಣ ಹಾತ್ (ಸಂತೆ)ಗಳನ್ನು ಗ್ರಾಮೀಣ ಕೃಷಿ ಮಾರುಕಟ್ಟೆಗಳಾಗಿ ಅಭಿವೃದ್ಧಿಪಡಿಸಲು ಒಂದು ಕೃಷಿ ಮಾರುಕಟ್ಟೆ ಮೂಲ ಚೌಕಟ್ಟು ನಿಧಿಗಾಗಿ 2,000 ಕೋಟಿ ರೂ. ಘೋಷಿಸಿ ದ್ದಾರೆ. ಈಗ ಇರುವ 585 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಮೇಲ್ದ ರ್ಜೆಗೆ ಏರಿಸುವುದೂ ಇದರಲ್ಲಿ ಸೇರಿದೆ. ಆದರೆ ಬಜೆಟ್‌ನಲ್ಲಿ ಹಾತ್‌ಗಳನ್ನು ಮೇಲ್ದರ್ಜೆಗೆ ಏರಿಸಲು ಯಾವುದೇ ಮೊತ್ತವನ್ನು ಮೀಸಲಾಗಿ ಇಟ್ಟಿಲ್ಲ.

ವಿತ್ತ ಸಚಿವರು ವಿದ್ಯುತ್ ಪೂರೈಕೆಯನ್ನು ಹೆಚ್ಚಿಸುವ ಒಂದು ಯೋಜನೆಯನ್ನು ವಿಶೇಷವಾಗಿ ಒತ್ತಿ ಹೇಳಿದ್ದಾರೆ. ಈ ಯೋಜನೆಯಲ್ಲಿ ನಾವು 16,000 ಸಾವಿರ ಕೋಟಿ ರೂ. ವ್ಯಯಿಸುತ್ತಿದ್ದೇವೆ. ಕೇವಲ ಒಂದು ಗಂಟೆ ವಿದ್ಯುತ್ ಕಡಿತವಾದರೂ ನಾವು ಆತಂಕ ಪಡುತ್ತೇವೆ. ಹೀಗಿರುವಾಗ ತಮ್ಮ ಮನೆಗಳಿಗೆ ವಿದ್ಯುತ್ ಸಿಗದಿರುವ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಯೋಚಿಸಿ. ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಯಿಂದ ಇಂಥವರ ಬದುಕು ಬದಲಾಗಲಿದೆ ಎಂದಿದ್ದಾರೆ ಅವರು. ಆದರೆ ಅವರು ನೀಡಿರುವ ಅಂಕಿ-ಸಂಖ್ಯೆಗಳು ಸರಿಯಾಗಿಲ್ಲ. ಈ ಯೋಜನೆಗೆ 2017ರಿಂದ 2019ರವರೆಗಿನ ಎರಡು ವರ್ಷಗಳಿಗೆ ಒಟ್ಟು ವ್ಯಯಿಸುವ ಮೊತ್ತವೆಂದು ಸರಕಾರ ಅದಾಗಲೇ 16,320ಕೋಟಿ ರೂ. ಮೊತ್ತಕ್ಕೆ ಮಂಜೂರಾತಿ ನೀಡಿಯಾಗಿತ್ತು. ಇದರಲ್ಲಿ ಸರಕಾರ 12,320ಕೋಟಿ ರೂ. ಒದಗಿಸಬೇಕಿತ್ತು. ಈ ಆರ್ಥಿಕ ವರ್ಷದಲ್ಲಿ (2107-18), ಈ ಯೋಜನೆಗೆ ಕೇಂದ್ರ ಸರಕಾರದಿಂದ 3,600ರೂ. ದೊರಕಬೇಕಾಗಿತ್ತು. ಆದರೆ ದೊರಕಿದ್ದು 2,000 ಸಾವಿರ ಕೋಟಿ ರೂ. ಮಾತ್ರ 2018-19ರಲ್ಲಿ 8,720ಕೋಟಿ ರೂ. ದೊರಕಬೇಕಿದೆ. ಆದರೆ ಬಜೆಟ್‌ನಲ್ಲಿ ಇದಕ್ಕೆ ಕೇವಲ 3,500ಕೋಟಿ ರೂ. ಮೀಸಲಿಡಬೇಕಾಗಿದೆ. ಅಲ್ಲದೆ ಹೊಸ ಬಜೆಟ್‌ನಲ್ಲಿ, ಇನ್ನೊಂದು ಗ್ರಾಮೀಣ ವಿದ್ಯುದೀಕರಣ ಯೋಜನೆಯಾಗಿರುವ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ನೀಡಬೇಕಾದ ಮೊತ್ತದಲ್ಲಿ ಸುಮಾರು ಶೇ.30 ಕಡಿತ ಮಾಡಲಾಗಿದೆ.

ವೆಚ್ಚದಲ್ಲಿ ಕಡಿತ

ತಮ್ಮ ಭಾಷಣದಲ್ಲಿ ಜೇಟ್ಲಿಯವರು ಬಿದಿರು ಬೇಸಾಯದಿಂದ ಗ್ರಾಮೀಣ ಆದಾಯವನ್ನು ಹೆಚ್ಚಿಸುವುದಕ್ಕಾಗಿ 1,290 ಕೋಟಿ ರೂ.ವೆಚ್ಚದ ಒಂದು ಪುನರ್ರಚಿಸಲಾದ ರಾಷ್ಟ್ರೀಯ ಬಿದಿರು ಅಭಿಯಾನದ ಘೋಷಣೆ ಮಾಡಿದರು. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದಕ್ಕಾಗಿ ಮೀಸಲಿಡಲಾದ ಮೊತ್ತ ಕೇವಲ 300ಕೋಟಿ ರೂ.

ಸಚಿವರು ಬಡವರಿಗೆ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಲು ನೆರವಾಗುವ ಬಗ್ಗೆ ಮಾತಾಡಿದರು ಮತ್ತು 2020ರ ವೇಳೆಗೆ ಪ್ರತಿಯೊಬ್ಬ ಬಡವನಿಗೂ ಒಂದು ಮನೆಯನ್ನು ಒದಗಿಸುವ ಗುರಿಯನ್ನು ನಿಗದಿಪಡಿಸಿದರು. ಈ ವರ್ಷ ಹಾಗೂ ಮುಂದಿನ ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತೆ 51 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಜೇಟ್ಲಿ ಹೇಳಿದರು. ಆದರೆ ಇದಕ್ಕೆ ಮೀಸಲಿಡಲಾದ ಮೊತ್ತ್ತವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.5ರಷ್ಟು ಕಡಿತ ಮಾಡಿ 27,505 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ವಸತಿಗೆ ಮೀಸಲಿಡಲಾದ ಮೊತ್ತವನ್ನು 23,000 ಕೋಟಿ ರೂ.ಯಿಂದ 21,000 ಕೋಟಿ ರೂ.ಗೆ ಇಳಿಸಲಾಗಿದೆ.

ಅದೇ ರೀತಿಯಾಗಿ ಕೇಂದ್ರ ಸರಕಾರವು 2018-2019ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸಮಗ್ರಶಿಶು ಅಭಿವೃದ್ಧಿ ಯೋಜನೆ ಮತ್ತು ಸ್ವಚ್ಛಭಾರತ ಅಭಿಯಾನದ ಮೇಲೆ, ಹಾಗೂ ಇತರ ಪ್ರಮುಖ ಯೋಜನೆಗಳ ಮೇಲೆ ವ್ಯಯಿಸುವ ಮೊತ್ತ ಕೂಡ, ಅದು 2017-2018ರಲ್ಲಿ ವ್ಯಯಿಸಿದ ಮೊತ್ತಕ್ಕಿಂತ ಕಡಿಮೆಯಾಗಲಿದೆ.

Similar News