ರೌಡಿ ಶೀಟರ್‌ಗಳೆಲ್ಲ ನಿಮ್ಮ ಪಕ್ಷದವರೇ? ಶೆಟ್ಟರ್‌ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

Update: 2018-02-06 14:33 GMT

ಬೆಂಗಳೂರು, ಫೆ. 6: ‘ರೌಡಿ (ರೌಡಿ ಶೀಟರ್‌ಗಳು) ಪಟ್ಟಿಯಲ್ಲಿರುವವರೆಲ್ಲರೂ ನಿಮ್ಮ ಪಕ್ಷದ ಸದಸ್ಯರೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಯು.ಬಿ. ಬಣಕಾರ್ ಪರ ಸುನೀಲ್‌ಕುಮಾರ್ ಕೇಳಿದ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸುವ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ರೌಡಿ ಶೀಟರ್ ರೌಡಿಯೇ. ಆದರೆ, ಮುಗ್ಧರು ರೌಡಿ ಪಟ್ಟಿಯಲ್ಲಿ ಸೇರಿದ್ದರೆ ಅಂತವರ ಹೆಸರನ್ನು ಗಮನಕ್ಕೆ ತಂದರೆ ಆ ಪಟ್ಟಿಯಿಂದ ಕೈಬಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಸಾಧ್ಯವಿದ್ದರೆ ಪಟ್ಟಿ ಬಹಿರಂಗ: ಸುಮ್ಮನೆ ಯಾರನ್ನೂ ರೌಡಿ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. ವ್ಯಕ್ತಿಯ ಅಪರಾಧ ಹಿನ್ನೆಲೆಯಲ್ಲಿ ಹಾಗೂ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ದಾಖಲೆಗಳನ್ನು ಆಧರಿಸಿ, ಎಸ್ಪಿ ಶಿಫಾರಸಿನ ಮೇಲೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದರು.

ರೌಡಿ ಶೀಟರ್‌ಗಳ ಪಟ್ಟಿಯನ್ನು ಸಾಧ್ಯವಿದ್ದರೆ ಬಹಿರಂಗಪಡಿಸಲಾಗುವುದು ಮತ್ತು ಅಮಾಯಕರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ, ಅವರ ಹೆಸರನ್ನು ಕೈ ಬಿಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಪೊಲೀಸ್ ಕೈಪಿಡಿ ಅನುಚ್ಛೇದ 1059 ಹಾಗೂ ಪೊಲೀಸ್ ಇಲಾಖೆಯ ಸ್ಥಾಯಿ ಆದೇಶ 1003 ಸೂಚನೆಗಳನ್ವಯ 8 ಮಾನದಂಡಗಳನ್ನು ಆಧರಿಸಿ ರೌಡಿ ಪಟ್ಟಿ ತಯಾರಿಸಲಾಗುತ್ತದೆ ಎಂದರು.

ಸ್ತ್ರೀಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಕೀಟಲೆ ನೀಡುವುದು, ಶಾಂತಿ ಪಾಲಿಸುವ ವ್ಯಕ್ತಿಗಳಿಗೆ ಹಿಂಸಿಸುವುದು, ಬಲ ಪ್ರಯೋಗ, ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸುವವರಿಗೆ, ದೌರ್ಜನ್ಯದಿಂದ ವಂತಿಕೆ ವಸೂಲಿ, ಭೂ ವಿವಾದಗಳಲ್ಲಿ ದೌರ್ಜನ್ಯ ಎಸಗುವವರಿಗೆ, ಅಸಭ್ಯ ವರ್ತನೆ, ದೊಂಬಿ, ಘರ್ಷಣೆ, ಸರಗಳ್ಳತನ, ದರೋಡೆ, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ನೀಡುವುದು ಸೇರಿ ಘೋರ ಅಪರಾಧಗಳಲ್ಲಿ ತೊಡಗುವವರನ್ನು ರೌಡಿಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ನನ್ನ ಕ್ಷೇತ್ರದಲ್ಲಿ 320ಕ್ಕೂ ಹೆಚ್ಚು ವ್ಯಕ್ತಿಗಳನ್ನು ಅನಗತ್ಯವಾಗಿ ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗಿದೆ ಎಂದು ಗಮನಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಸುನಿಲ್ ಕುಮಾರ್, ಒಂದು ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರನ್ನು ಗುರುತಿಸಿ ರೌಡಿಪಟ್ಟಿಗೆ ಸೇರಿಸಲಾಗುತ್ತಿದೆ. ಈ ಮೂಲಕ ಚಳವಳಿಯನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದು ದೂರಿದರು.

ಈ ಹಂತದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಬಿಜೆಪಿ, ಸಂಘ ಪರಿವಾರದ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಟ್ಟು ರೌಡಿಪಟ್ಟಿ ತೆರೆಯಲಾಗುತ್ತಿದೆ. ಸರಕಾರವೇ ನೇರವಾಗಿ ಪೊಲೀಸರನ್ನು ರಾಜಕೀಯಕ್ಕೆ ಬಳಸಿಕೊಂಡು ನಮ್ಮ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ‘ರೌಡಿ ಪಟ್ಟಿಯಲ್ಲಿರುವವರ ಬಗ್ಗೆ ಬಿಜೆಪಿ ಸದಸ್ಯರು ತೋರಿಸುತ್ತಿರುವ ಕಾಳಜಿಯನ್ನು ನೋಡಿದರೆ ಅವರೆಲ್ಲ ಆ ಪಕ್ಷದ ಕಾರ್ಯಕರ್ತರಿದ್ದಂತಿದೆ’ ಎಂದು ಹೇಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಆಡಳಿತ ಪಕ್ಷದ ಸದಸ್ಯರ ಮೇಲೆ ಮುಗಿಬಿದ್ದರು.

ಕೂಡಲೇ ಮಧ್ಯಪ್ರವೇಶಿಸಿ ಜೆಡಿಎಸ್‌ನ ಬಂಡಾಯ ಶಾಸಕ ಝಮೀರ್ ಅಹ್ಮದ್ ಖಾನ್, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ರೌಡಿಗಳ ಪಟ್ಟಿ ಕೇಳುತ್ತಿರುವುದೇಕೇ ? ಮುಂದಿನ ಚುನಾವಣೆಯಲ್ಲಿ ರೌಡಿಗಳನ್ನು ಬಳಸಿಕೊಳ್ಳುವ ಉದ್ದೇಶ (ಬಿಜೆಪಿ) ನಿಮಗಿದೆಯೇ? ಎಂದು ಬಿಜೆಪಿ ಸದಸ್ಯರನ್ನು ಕೆರಳಿಸಿದರು.

ಗದ್ದಲ-ಕೋಲಾಹಲ ಹೆಚ್ಚಾಗಿದ್ದರಿಂದ ಎದ್ದು ನಿಂದ ಸ್ಪೀಕರ್ ಕೋಳಿವಾಡ, ಸದಸ್ಯರನ್ನು ಕುಳಿತುಕೊಳ್ಳುವಂತೆ ಸೂಚಿಸಿದರು. ಆದರೆ, ಸ್ಪೀಕರ್ ಸೂಚನೆಯನ್ನು ಕೇಳಿಸಿಕೊಳ್ಳದೇ ಬಿಜೆಪಿಯವರೊಂದಿಗೆ ಚಕಮಕಿ ಮುಂದುವರಿಸಿದ್ದರಿಂದ ಝಮೀರ್ ಅಹ್ಮದ್ ರನ್ನು ಕೂರಿಸಲು ಮಾರ್ಷಲ್‌ಗಳಿಗೆ ಸೂಚನೆ ನೀಡಲಾಯಿತು.

‘ಯಾವುದೇ ವ್ಯಕ್ತಿಯನ್ನು ಅನಗತ್ಯವಾಗಿ ರೌಡಿ ಪಟ್ಟಿಗೆ ಸೇರಿಸುವುದಿಲ್ಲ. ಅವರ ಕ್ರಿಮಿನಲ್ ಚಟುವಟಿಗಳನ್ನು ಪರಿಶೀಲಿಸಿ ಎಸ್ಪಿ ಶಿಫಾರಸನ್ನು ಆಧರಿಸಿ ಜಿಲ್ಲಾಧಿಕಾರಿ ಅನುಮೋದನೆ ಬಳಿ ರೌಡಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ’
-ರಾಮಲಿಂಗಾರೆಡ್ಡಿ, ಗೃಹ ಸಚಿವ

‘ಪಾಕಿಸ್ತಾನದ ಬಾವುಟ ಹಿಡಿದರೆ ಮುಗ್ಧ, ಭಗವಾಧ್ವಜ ಹಿಡಿದರೆ ರೌಡಿ ಎಂಬ ಸರಕಾರದ ಧೋರಣೆ ಅಕ್ಷಮ್ಯ. ನಿರ್ದಿಷ್ಟ ಸಂಘಟನೆಗಳ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸುವುದು ಸರಿಯಲ್ಲ’
-ಸಿ.ಟಿ.ರವಿ ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News