ಕೋಮುವಾದದ ಹೆಸರಲ್ಲಿ ಸಂಘಪರಿವಾರದಿಂದ 13 ಕೊಲೆ: ರಾಮಲಿಂಗಾ ರೆಡ್ಡಿ

Update: 2018-02-06 15:31 GMT

ಬೆಂಗಳೂರು, ಫೆ.6: ಕೋಮುವಾದದ ಹೆಸರಲ್ಲಿ ರಾಜ್ಯದಲ್ಲಿ 13 ಮುಸ್ಲಿಮರ ಕೊಲೆಯಾಗಿದ್ದು, ಈ ಎಲ್ಲ ಹತ್ಯೆಗಳ ಹಿಂದೆ ಸಂಘಪರಿವಾರದ ಅಂಗ ಸಂಸ್ಥೆಗಳ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಬಿಜೆಪಿ ಸದಸ್ಯರು ನಡೆಸಿದ ಚರ್ಚೆಗೆ ಉತ್ತರಿಸಿದ ಅವರು, ಈ ಎಲ್ಲಾ ಹತ್ಯೆಗಳ ಹಿಂದೆ ವಿಶ್ವಹಿಂದೂಪರಿಷತ್, ಬಜರಂಗದಳ, ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳ ಕಾರ್ಯಕರ್ತರೇ ಆರೋಪಿಗಳಾಗಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 23 ಮಂದಿ ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಪಟ್ಟಿ ನೀಡಿದ್ದಾರೆ. ಆದರೆ, ವಾಸ್ತವಾಗಿ ಕೋಮುಗಲಭೆಯ ಹೆಸರಿನಲ್ಲಿ 11 ಮಂದಿ ಹಿಂದೂಗಳು ಕೊಲೆಯಾಗಿದ್ದಾರೆ ಎಂದು ಅವರು ಹೇಳಿದರು.

ಜೀವಂತವಾಗಿರುವ ಅಶೋಕ್ ಪೂಜಾರಿಯ ಹೆಸರನ್ನು ಶೋಭಾ ಕರಂದ್ಲಾಜೆ ತಮ್ಮ ಪಟ್ಟಿಯಲ್ಲಿ ಮೃತಪಟ್ಟಿರುವುದಾಗಿ  ತಿಳಿಸಿದ್ದಾರೆ. ಮಾಕಳಿ ರವಿ ಮೃತಪಟ್ಟಿದ್ದು ಅಪಘಾತದಲ್ಲಿ, ಶ್ರೀನಿವಾಸ್‌ಪ್ರಸಾದ್ ಜಗಳವೊಂದರಲ್ಲಿ ಕೊಲೆಯಾದರು, ಅಶ್ವಥ್, ಮಹಾದೇವ ಕಾಳೆ, ಬಂಡಿ ರಮೇಶ್ ರಾಜಕೀಯ ಕಾರಣಗಳಿಂದಾಗಿ ಹತ್ಯೆಯಾಗಿದ್ದಾರೆ ಎಂದು ಅವರು ವಿವರಣೆ ನೀಡಿದರು.

ಯೋಗೀಶ್‌ಗೌಡ ಜಮೀನು ವಿವಾದದ ಹಿನ್ನೆಲೆಯಲ್ಲಿ ಹತ್ಯೆಯಾಗಿದ್ದಾರೆ. ಈ ಎಲ್ಲ ಪ್ರಕರಣಗಳ ಪೈಕಿ ಯಾವುದೂ ಕೋಮುಗಲಭೆಯಿಂದ ಸಂಭವಿಸಿದ್ದಲ್ಲ.  ಇದು ಹಿಂದುಗಳನ್ನು ಹಿಂದೂಗಳೇ ಹತ್ಯೆಮಾಡಿರುವ ಘಟನೆಗಳು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಯಾರಾದರೂ ಮೃತಪಟ್ಟ ಕೂಡಲೇ ಅಲ್ಲಿಗೆ ಹೋಗುವ ಬಿಜೆಪಿ ನಾಯಕರು, ಮೃತದೇಹವನ್ನು ಎತ್ತಲು ಬಿಡದೆ, ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ. ಇದು ಹಿಂದೂ ವಿರೋಧಿ ಸರಕಾರ ಎಂದು ಪ್ರತಿಭಟನೆ ಮಾಡುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಸಂತೋಷ್ ಎಂಬ ಯುವಕನ ಹತ್ಯೆಯಾದಾಗಲೂ ಅದೇ ರೀತಿ ಆಯಿತು ಎಂದು ಅವರು ಹೇಳಿದರು.

ಗಾಂಜಾ ವಿಚಾರದಲ್ಲಿ ಸಂತೋಷ್ ಹತ್ಯೆಯಾಗಿರುವುದಾಗಿ ಅವರ ತಾಯಿಯೇ ಹೇಳಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೆಸ್ತಾ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಾಗಿರಲಿಲ್ಲ ಎಂದು ಆತನ ತಂದೆ ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿಯವರು, ಅವರನ್ನು ತಮ್ಮ ಕಾರ್ಯಕರ್ತರು ಎಂದು ಬಿಂಬಿಸುತ್ತಾರೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

ಧನ್ಯಶ್ರೀ ಎಂಬ ಹುಡುಗಿ ಬಿಜೆಪಿ ಕಾರ್ಯಕರ್ತನ ಬೆದರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಳು. ಆಕೆ ಮೃತಪಟ್ಟಾಗ ಶೋಭಾ ಕರಂದ್ಲಾಜೆ ಯಾಕೆ ಹೋರಾಟ ಮಾಡಲಿಲ್ಲ. ಆರೋಪಿ ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕಾಗಿಯೇ ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸುತ್ತಿದ್ದಂತೆ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಮಾತಿನ ಚಕಮಕಿ ನಡುವೆಯೇ ಕಾಂಗ್ರೆಸ್ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಸೂಚಿಸಿದ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವವನ್ನು ಶಾಸಕ ಎನ್.ಎ.ಹಾರೀಸ್ ಅನುಮೋದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News