×
Ad

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-02-06 21:12 IST

ಬೆಂಗಳೂರು, ಫೆ.6: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ಬಿಜೆಪಿ ಮಾಡಿದ ಆರೋಪಗಳನ್ನು ಅಂಕಿ ಅಂಶಗಳ ಸಮೇತ ಅಲ್ಲಗೆಳೆದ ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಆಡಳಿತಾವಧಿಗಿಂತ ನಮ್ಮ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಬಿಜೆಪಿ ಸದಸ್ಯರು ನಡೆಸಿದ ಚರ್ಚೆಗೆ ರಾಮಲಿಂಗಾರೆಡ್ಡಿ ನೀಡಿದ ಉತ್ತರವನ್ನು ವಿರೋಧಿಸಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

ಗೃಹ ಇಲಾಖೆಯು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿದೆ ಎಂದು ಬಿಜೆಪಿ ಮಾಡಿದ ಆರೋಪಕ್ಕೆ ತಮ್ಮ ಉತ್ತರದಲ್ಲಿ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ನಾನು ಹುಟ್ಟಿದಾಗಿನಿಂದಲೂ ಯಾರ ಮಾತನ್ನು ಕೇಳಿಲ್ಲ. ಆಡಳಿತ ಹೇಗೆ ನಡೆಸಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು ಎಂದರು.

ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ಆಗ ತಾನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತಿತ್ತು. ಆದುದರಿಂದ, ಬಿಜೆಪಿ ಯುವ ಮೋರ್ಚಾದವರ ಮಂಗಳೂರು ಚಲೋಗೆ ಅನುಮತಿ ನೀಡಿಲ್ಲ. ಟಿಪ್ಪು ಜಯಂತಿ ಆಚರಣೆಗೆ ವಿರೋಧವಿದ್ದರೂ ಸುಸೂತ್ರವಾಗಿ ನಡೆಸಲಾಯಿತು ಎಂದು ಅವರು ಹೇಳಿದರು.

ಹನುಮ ಜಯಂತಿಯನ್ನು ಹಿಂದೂಗಳು ಸಾವಿರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಯಾರ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ. ಹುಣಸೂರಿನಲ್ಲಿ ಪೊಲೀಸರು ಮೆರವಣಿಗೆಗೆ ನಿಗದಿ ಮಾಡಿದ್ದ ಮಾರ್ಗವನ್ನು ಬಿಟ್ಟು, ಬೇರೆ ಕಡೆ ಹೋಗುವುದಾಗಿ ಸಂಸದರೊಬ್ಬರು ಪಟ್ಟು ಹಿಡಿದದ್ದಲ್ಲದೆ, ಪೊಲೀಸರ ಮೇಲೆ ಕಾರು ಹತ್ತಿಸಿಕೊಂಡು ಹೋದರು. ಲಕ್ಷಾಂತರ ಜನ ಸೇರುವ ಜಾತ್ರೆಗಳಲ್ಲಿ ಯಾವುದೆ ಸಮಸ್ಯೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ನಾವು ಕಾಪಾಡುತ್ತೇವೆ ಎಂದು ಅವರು ತಿಳಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದ ಕಾರಣಕ್ಕೆ ಹಿಂದೂಗಳ ಹತ್ಯೆಯಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಆದರೆ, ಕೊಲೆ, ಕೊಲೆಯತ್ನ, ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿ ಮಾಡಿದ ಪ್ರಕರಣಗಳನ್ನು ಹೊರತು ಪಡಿಸಿ, ಬೇರೆ ಪ್ರಕರಣಗಳನ್ನು ಮಾತ್ರ ಹಿಂಪಡೆದಿದ್ದೇವೆ. ಅದೇ ರೀತಿ, ರೈತರ ಚಳವಳಿ, ವಿದ್ಯಾರ್ಥಿಗಳ ಹೋರಾಟ, ಕನ್ನಡಪರ ಸಂಘಟನೆಗಳ ಹೋರಾಟದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆದಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಕೆಎಫ್‌ಡಿ ಸಂಘಟನೆ ಈಗಾಗಲೆ ನಿಷೇಧವಾಗಿದೆ. ಸವಣೂರು ಗ್ರಾಮ ಪಂಚಾಯತ್ ನಲ್ಲಿ ಹಿಂದಿನ ಅವಧಿಯಲ್ಲಿ ಬಿಜೆಪಿ ಹಾಗೂ ಪಿಎಫ್‌ಐ ಅಧಿಕಾರ ಹಂಚಿಕೆ ಮಾಡಿಕೊಂಡಿತ್ತು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾಂಗ್ರೆಸ್ ಮತಗಳನ್ನು ವಿಭಜನೆ ಮಾಡುತ್ತವೆ. ಆದುದರಿಂದಲೇ, ಬಿಜೆಪಿ ಸರಕಾರದ ಅವಧಿಯಲ್ಲಿ ಅವರನ್ನು ನಿಷೇಧ ಮಾಡಿಲ್ಲ. ಈಗ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಹಿಂದೂ-ಮುಸ್ಲಿಮರನ್ನೆದೆ ಅಮಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುತ್ತೇವೆ. ಸಾಮಾನ್ಯ ಜನರು, ಸಂಘಪರಿವಾರದವರು ಸೇರಿದಂತೆ ಯಾರೇ ಆಗಿರಲಿ, ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿರುವ ಅಮಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತೇವೆ. ನಾವು ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದು, ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಇಡೀ ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳಲ್ಲಿ ಶಿಕ್ಷೆ ಕೊಡಿಸುವ ರಾಜ್ಯಗಳಲ್ಲಿ ನಾವೇ ಪ್ರಥಮ ಸ್ಥಾನದಲ್ಲಿದ್ದೇವೆ. ಬಾಂಗ್ಲಾ ದೇಶದ ಅಕ್ರಮ ವಲಸಿಗರ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸಂಸದ ಪ್ರಹ್ಲಾದ್ ಜೋಶಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ತನಿಖೆ ನಡೆಸಲಾಗುವುದು. ನಮ್ಮ ಸರಕಾರದ ಅವಧಿಯಲ್ಲಿ 6750 ಕೊಲೆಗಳು ನಡೆದಿವೆ, ಬಿಜೆಪಿ ಸರಕಾರವಿದ್ದಾಗ 8885 ಕೊಲೆಗಳು ನಡೆದಿವೆ. ಅತ್ಯಾಚಾರ ಪ್ರಕರಣಗಳು ಬಿಜೆಪಿ ಅವಧಿಯಲ್ಲಿ 2922, ನಮ್ಮ ಅವಧಿಯಲ್ಲಿ 3933(ಪೋಕ್ಸೋ ಕಾಯ್ದೆ ಬಂದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಳ), ಸರಗಳ್ಳತನ ನಮ್ಮ ಅವಧಿಯಲ್ಲಿ 4359, ಬಿಜೆಪಿ ಅವಧಿಯಲ್ಲಿ 4675, ಹಲ್ಲೆ ಪ್ರಕರಣಗಳು ನಮ್ಮ ಅವಧಿಯಲ್ಲಿ 94,886, ಬಿಜೆಪಿ ಅವಧಿಯಲ್ಲಿ 1.13 ಲಕ್ಷ, ಖೋಟಾ ನೋಟು ಚಲಾವಣೆ ನಮ್ಮ ಅವಧಿಯಲ್ಲಿ 306, ಬಿಜೆಪಿ ಅವಧಿಯಲ್ಲಿ 560 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ನಮ್ಮ ಆಡಳಿತ ಚೆನ್ನಾಗಿದೆಯೋ, ನಿಮ್ಮ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿತ್ತೊ ಎಂಬುದನ್ನು ಅಂಕಿ ಅಂಶಗಳನ್ನು ನೋಡಿಕೊಂಡು ಹೇಳಿ ಎಂದು ಬಿಜೆಪಿಯವರಿಗೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News