ನಕಲಿ ಕೈಗಡಿಯಾರ ಮಾರಾಟ ಆರೋಪ: ಐವರ ಬಂಧನ
Update: 2018-02-06 21:53 IST
ಬೆಂಗಳೂರು, ಫೆ.6: ಪ್ರತಿಷ್ಠಿತ ಕಂಪೆನಿ ಮತ್ತು ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಕೈ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಬಂಧಿಸಿ 90 ಲಕ್ಷ ರೂ. ಬೆಲೆಬಾಳುವ ಮಾಲನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ನಿವಾಸಿಗಳಾದ ಶಿಯಾಬ್, ಅಶ್ರಫ್, ತಾಶಿಪ್, ದಿನೇಶ್‌ಕುಮಾರ್, ಶಫಾನ್ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಉಪ್ಪಾರಪೇಟೆ ವ್ಯಾಪ್ತಿಯ ಗಾಂಧಿನಗರದ ಸುಖ್‌ಸಾಗರ್ ಕಾಂಪ್ಲೆಕ್ಸ್‌ನ ಅಂಗಡಿಗಳಲ್ಲಿ ಪ್ರತಿಷ್ಠಿತ ಕಂಪೆನಿಗಳ ಮತ್ತು ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಕೈಗಡಿಯಾರಗಳನ್ನು ಅಕ್ರಮ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದೆ.
ಸೋಮವಾರ ಪೊಲೀಸರು ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 90 ಲಕ್ಷ ರೂ. ಬೆಲೆಯ ವಿವಿಧ ಬ್ರಾಂಡ್‌ಗಳ ಕೈಗಡಿಯಾರಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.