ಬೆಂಗಳೂರು: ಅಕ್ರಮ ಮರಳು ಸಾಗಾಣಿಕೆದಾರರ ಮೇಲೆ ಕ್ರಮಕ್ಕೆ ಆಗ್ರಹ
ಬೆಂಗಳೂರು, ಫೆ.6: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿನ ಕೃಷ್ಣ ನದಿಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ ತಾಲೂಕಿನ ಅಂಜುಳ, ಗೋಪಳಪುರ, ಬುಂಕಲದೊಡ್ಡಿ, ನಿಂಗದಹಳ್ಳಿ, ಚಿಂಚೋಡಿ, ಮೇದರಗಾಳ, ಕರ್ಕಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ದಿನದ 24 ಗಂಟೆಗಳ ಕಾಲ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಅಕ್ರಮವಾಗಿ ಮರಳು ತಂದು ರಸ್ತೆಯ ಪಕ್ಕದಲ್ಲಿರುವ ಜಮೀನುಗಳಲ್ಲಿ ಸಂಗ್ರಹಿಸಿ ಲಾರಿಗಳಿಗೆ ತುಂಬಿಸಿ ರಾಜಾರೋಷವಾಗಿ ಹತ್ತಿರದ ಜಿಲ್ಲೆ, ತಾಲೂಕುಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿನ ಅಕ್ರಮ ಮರಳುಗಾರಿಕೆಯಿಂದಾಗಿ ಕೋಟ್ಯಂತರ ರೂ.ಗಳು ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. 10 ಚಕ್ರವುಳ್ಳ ವಾಹನಕ್ಕೆ 25 ಟನ್ ಮರಳು ತುಂಬಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ 36-37 ಟನ್ ಮರಳು ತುಂಬಿಸಲಾಗುತ್ತಿದೆ. ಈ ಮೂಲಕ ಲಕ್ಷಾಂತರ ರೂ.ಗಳು ಲೂಟಿ ಮಾಡಲಾಗುತ್ತಿದೆ. ಅಲ್ಲದೆ, ಚೆಕ್‌ಪೋಸ್ಟ್‌ನ ಅಧಿಕಾರಿಗಳು ಲಾರಿ ಮಾಲಕರೊಂದಿಗೆ ಶಾಮೀಲಾಗಿದ್ದು, ದಿನನಿತ್ಯ 90-100 ಲಾರಿಗಳು ಅಕ್ರಮ ಮರಳು ಕಳ್ಳ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.
ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ತಲುಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಲಾರಿ ಹಿಡಿದ ನಾಟಕ ಮಾಡಿ, ನಂತರ ಅದನ್ನು ಬಿಡುಗಡೆ ಮಾಡಿ ಕಳುಹಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಮರಳು ನೀತಿಯಲ್ಲಿ ತಿದ್ದುಪಡಿ ಮಾಡಿ ಜನ ಸಾಮಾನ್ಯರಿಗೂ ಮರಳು ದೊರೆಯುವಂತೆ ನೀತಿ ಜಾರಿ ಮಾಡಬೇಕು. ಪ್ರಭಾವಿ ಗುತ್ತಿಗೆದಾರರು ಜೆಸಿಬಿ ಯಂತ್ರಗಳ ಮೂಲಕ ಅಕ್ರಮವಾಗಿ ಗಣಿಗಾರಿಕೆಯನ್ನು ನಿರ್ವಹಣೆ ಮಾಡುತ್ತಿದ್ದು, ಯಂತ್ರಗಳ ಮೂಲಕ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ರಾತ್ರಿ ಸಮಯದಲ್ಲಿ ಮರಳು ಸಾಗಾಣಿಕೆಯನ್ನು ಆಯಾ ಜಿಲ್ಲೆ ವ್ಯಾಪ್ತಿಯಲ್ಲಿಯೇ ಸೀಮಿತಗೊಳಿಸಬೇಕು. ಈ ಕುರಿತು ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರಾತ್ರಿ ವೇಳೆ ಗಣಿಗಾರಿಕೆ ನಿಷೇಧ ಮಾಡಿ, ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ ಅವಕಾಶ ನೀಡಬೇಕು. ಮರಳು ತುಂಬಿದ ಲಾರಿಗಳಿಗೆ ರಸ್ತೆಗಳಲ್ಲಿ ವಿನಾಯಿತಿ ನೀಡಬೇಕು ಹಾಗೂ ಗ್ರಾಮದ ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಮರಳು ಸಾಗಾಣಿಕೆ ಮಾಡಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅವೈಜ್ಞಾನಿಕವಾಗಿ ಐದು ವರ್ಷಗಳವರೆಗೆ ಗುತ್ತಿಗೆ ನೀಡಿದ್ದು, ಅದನ್ನು ರದ್ದುಪಡಿಸಬೇಕು. ನದಿಯಲ್ಲಿ ಮೂರು ಮೀಟರ್ ಆಳದವರೆಗೆ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹೀಗಾಗಿ, ಅದನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿದರು.