ಕನಿಷ್ಠ ವೇತನ ನಿಗದಿಪಡಿಸಲು ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಧರಣಿ
ಬೆಂಗಳೂರು, ಫೆ.6: ಬಿಸಿಯೂಟ ತಯಾರಕರನ್ನು ಅರೆಕಾಲಿಕ ಖಾಯಂ ನೌಕರರು ಎಂದು ಪರಿಗಣಿಸಿ ಕನಿಷ್ಠ ವೇತನ ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ನೂರಾರು ಮಹಿಳೆಯರು ನಗರದ ಸ್ವಾತಂತ್ರ ಉದ್ಯಾನದಲ್ಲಿ ಧರಣಿ ನಡೆಸಿದರು.
ಇದಕ್ಕೂ ಮೊದಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಬಿಸಿಯೂಟ ತಯಾರಕರು ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು. ಈ ವೇಳೆ ಸಚಿವರು, ನಿಮ್ಮ ಭರವಸೆಗಳನ್ನು ಈಡೇರಿಸಲಾಗುವುದು. ಈಗ ಅಧಿವೇಶನ ನಡೆಯುತ್ತಿದ್ದು, ತಾಳ್ಮೆಯಿಂದ ಇರಬೇಕೆಂದು ಪ್ರತಿಭಟನೆ ನಿರತರಲ್ಲಿ ಮನವಿ ಮಾಡಿದರು. ಆದರೆ, ಇಷ್ಟಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಸಚಿವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ, ಧರಣಿ ಮಾಡಿದ ಸಂದರ್ಭದಲ್ಲಿ ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆ. ಕಳೆದ ನ.15ರಂದು ಮನವಿ ಸಲ್ಲಿಸಲಾಗಿತ್ತು. ಡಿ.12ರಂದು ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿ ಗಡುವು ನೀಡಲಾಗಿತ್ತು. ಆದರೆ, ನಮ್ಮ ಬೇಡಿಕೆಗಳು ಕೇವಲ ಮಾತಿನ ಭರವಸೆಯಾಗಿ ಉಳಿದಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಫೆಡರೇಷನ್‌ನ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮ, ಕೇಂದ್ರ ಸರಕಾರ ಬಿಸಿಯೂಟ ತಯಾರಕರಿಗೆ ಕೇವಲ 600 ರೂ. ಮಾಸಿಕ ವೇತನ ಕೊಡುತ್ತಿದೆ. ಬಜೆಟ್‌ನಲ್ಲೂ ವೇತನ ಹೆಚ್ಚಿಸದೆ ದುಡಿಯುವ ವರ್ಗವನ್ನು ನಿರ್ಲಕ್ಷಿಸಿದೆ. ಈಗ ದೊರೆಯುತ್ತಿರುವ ವೇತನದಿಂದ ಹಸಿವು, ಬಡತನ ಕಡಿಮೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರಕಾರ ತಾರತಮ್ಯ ನೀತಿಯನ್ನು ಬದಿಗಿಟ್ಟು ಕಾರ್ಮಿಕರ ಹಿತರಕ್ಷಿಸಬೇಕು ಎಂದರು.
ರಾಜ್ಯದಲ್ಲಿ ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಇಂದಿನವರೆಗೂ ಸುಮಾರು 15 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ನೀಡುವ ಅಲ್ಪ ವೇತನ ಹೊರತುಪಡಿಸಿದರೆ ಬೇರೆ ಯಾವುದೇ ಸೌಲಭ್ಯಗಳಿಲ್ಲ. ಅಕ್ಷರ ದಾಸೋಹ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಅಡುಗೆ ಮಾಡುವ ಸಮಯದಲ್ಲಿ ಅಗ್ನಿ ಆಕಸ್ಮಿಕ, ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ಅಂಗವಿಕಲರಾದರೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಇಲ್ಲ. ಬೆಳಗ್ಗೆ 9.30ಕ್ಕೆ ಶಾಲೆಗೆ ಕೆಲಸಕ್ಕೆ ಹೋದರೆ ಸಂಜೆ 4ರವೆರೆಗೆ ದುಡಿಯುತ್ತೇವೆ. ಸಮವಸ್ತ್ರ (ಏಪ್ರನ್), ತಲೆಗೆ ಟೊಪ್ಪಿ ಖರೀದಿಗೂ ಹಣ ನೀಡುವುದಿಲ್ಲ. ನಮಗೆ ಮಾಸಿಕ ಬರುವ 2200 ರೂ.ನಲ್ಲೇ ಇದನ್ನು ಕೊಂಡುಕೊಳ್ಳಬೇಕು. ನಮ್ಮ ಸ್ವಂತ ಮಕ್ಕಳಂತೆ ಅವರಿಗೆ ಅಡುಗೆ ಮಾಡಿ ಬಡಿಸುತ್ತೇವೆ. ಆದರೆ, ನಮಗೆ ಯಾವುದೇ ಸೌಲಭ್ಯಗಳಿಲ್ಲ. ಒಂದು ದಿನ ರಜೆ ಹಾಕಿದಲ್ಲಿ ಆ ದಿನದ ಸಂಬಳ ಕಡಿತಗೊಳಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇಡಿಕೆಗಳು:
ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ತಮಿಳುನಾಡು ಮಾದರಿಯಲ್ಲಿ ಅರೆಕಾಲಿಕ ಖಾಯಂ ನೌಕರರು ಎಂದು ಪರಿಗಣಿಸಬೇಕು. ಇಎಸ್‌ಐ ಹಾಗೂ ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಯೋಜನೆಗಳನ್ನು ಜಾರಿ ಮಾಡಬೇಕು. ಅಡುಗೆ ಮಹಿಳಾ ಸಿಬ್ಬಂದಿಗೆ 26 ವಾರಗಳ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು. ಸ್ವಾಭಾವಿಕ ಮರಣ ಹೊಂದಿದರೆ ಕನಿಷ್ಠ 2 ಲಕ್ಷ ಪರಿಹಾರ ನೀಡಬೇಕು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷದ ವಿಮೆ ಜಾರಿ ಮಾಡಬೇಕು.