ಫೆಬ್ರವರಿ ಅಂತ್ಯದೊಳಗೆ ಬಿಬಿಎಂಪಿ ಬಜೆಟ್ ಮಂಡನೆ: ಮೇಯರ್ ಸಂಪತ್‌ರಾಜ್
ಬೆಂಗಳೂರು, ಫೆ. 6: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ವರ್ಷದ ಬಜೆಟ್ ಅನ್ನು ಫೆಬ್ರವರಿ ಅಂತ್ಯದೊಳಗೆ ಮಂಡಿಸಲಾಗುತ್ತದೆ ಎಂದು ಮೇುರ್ ಸಂಪತ್‌ರಾಜ್ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ನಗರದ ಶಿವಾನಂದ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಫೆ.16 ರಂದು ಬಜೆಟ್ ಮಂಡಿಸುತ್ತಿದ್ದು, ಅಲ್ಲಿನ ಅನುದಾನವನ್ನು ಪರಿಗಣಿಸಿದ ನಂತರ ಈ ತಿಂಗಳ ಅಂತ್ಯದೊಳಗೆ ಪಾಲಿಕೆ ಬಜೆಟ್ ಮಂಡಿಸಲಾಗುತ್ತದೆ ಎಂದರು.
ಬಜೆಟ್‌ಗೆ ಸಂಬಂಧಿಸಿದಂತೆ ಈಗಾಗಲೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಹದೇವು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡುತ್ತಿದ್ದಾರೆ. ಈ ವಾರವೀಡಿ ನಗರದ ವಿವಿಧ ವಾರ್ಡ್‌ಗಳಲ್ಲಿನ ಸಂಘ-ಸಂಸ್ಥೆಗಳ, ಉದ್ದಿಮೆದಾರರ, ಕನ್ನಡಪರ ಸಂಘಟನೆಗಳ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದ ಅವರು, ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಬಾರಿ ಬಜೆಟ್ 10 ಸಾವಿರ ಕೋಟಿ ದಾಟುವ ನಿರೀಕ್ಷೆಯಿದೆ. ಎಲ್ಲ ಅಗತ್ಯತೆಗಳನ್ನು ಪರಿಗಣಿಸಿ ಬಜೆಟ್ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿಗೆ ನಗರದಾದ್ಯಂತ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಫೆ.11 ರಂದು 10 ಸಾವಿರ ವ್ಯಾಪಾರಿಗಳಿಗೆ ಹಾಗೂ ಫೆ.25 ರಂದು 15 ಸಾವಿರ ಜನ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ. ಅನಂತರ ಸಮೀಕ್ಷೆ ನಡೆಸಿ, ಹೊಸ ವ್ಯಾಪಾರಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನುಡಿದರು.
ಹೆಚ್ಚುತ್ತಿರುವ ಜನದಟ್ಟಣೆ ಹಾಗೂ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಾನಂದ ವೃತ್ತದ ಸಮೀಪ ಉಕ್ಕಿನ ಸೇತುವೆ ಕಾಮಗಾರಿ ಆರಂಭ ಮಾಡಿದ್ದು, ಈ ಕಾಮಗಾರಿಯನ್ನು ಎಂವಿಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ವಹಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದ ಅವರು, ಈ ಸೇತುವೆ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾಮಗಾರಿ ಆರಂಭಕ್ಕೆ ಹೈ ಕೋರ್ಟ್ ಅವಕಾಶ ನೀಡಿದ್ದರಿಂದ ಜನವರಿಯಿಂದ ಕೆಲಸ ಆರಂಭ ಮಾಡಲಾಗಿದೆ ಎಂದರು.
ಶಿವಾನಂದವೃತ್ತದ ಸಮೀಪ ರೈಲು, ಬಸ್ ನಿಲ್ದಾಣವಿದ್ದು, ಮಲ್ಲೇಶ್ವರಂ ಹಾಗೂ ರಾಜಾಜಿನಗರ ಸೇರಿದಂತೆ ಪಶ್ಚಿಮ ಭಾಗದ ಪ್ರದೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಆದುದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.