ಸಾಕ್ಷರತಾ ಭಾರತ ಪ್ರೇರಕ, ಸಂಯೋಜಕರ ಮರು ನೇಮಕಕ್ಕೆ ಆಗ್ರಹಿಸಿ ಧರಣಿ
ಬೆಂಗಳೂರು, ಫೆ.6: ಲೋಕ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ನಡೆಯುತ್ತಿರುವ ಸಾಕ್ಷರತಾ ಭಾರತ ಕಾರ್ಯಕ್ರಮದ ಪ್ರೇರಕರು ಹಾಗೂ ಸಂಯೋಜಕರನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಮರು ನೇಮಿಸಿಕೊಳ್ಳಲು ಆಗ್ರಹಿಸಿ ಕರ್ನಾಟಕ ಸಾಕ್ಷರತಾ ಪ್ರೇರಕರ ಹಾಗೂ ಸಂಯೋಜಕರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾಕ್ಷರತಾ ಪ್ರೇರಕರು ಹಾಗೂ ಸಂಯೋಜಕರು ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಮರು ನೇಮಕ ಮಾಡಿಕೊಳ್ಳುವಂತೆ ಘೋಷಣೆಗಳು ಕೂಗಿದರು.
ರಾಜ್ಯದಾದ್ಯಂತ 8 ಸಾವಿರಕ್ಕೂ ಅಧಿಕ ಜನರು ಶಿಕ್ಷಣ ಮತ್ತು ಸಾಕ್ಷರತಾ ಭಾರತ, ಸಾಕ್ಷರ ನಾಡು, ಸಂಪೂರ್ಣ ಆಂದೋಲನ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿದ್ಧಾರೆ. ಆದರೆ, ಇದೀಗ ಈ ಕಾರ್ಯಕ್ರಮಗಳು ಮುಕ್ತಾಯಗೊಂಡಿದ್ದರಿಂದ ಪ್ರೇರಕರಾಗಿ ಸೇವೆ ಸಲ್ಲಿಸಿದವರನ್ನು ಸರಕಾರಗಳು ಕೈ ಬಿಟ್ಟಿವೆ. ಇದರಿಂದಾಗಿ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಬ್ಲೂ.ಎಸ್.ಪ್ರಧಾನಿ ಮಾತನಾಡಿ, ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದ ನೂರಾರು ಮಹಿಳೆಯರು ಇಳಿ ವಯಸ್ಸಿನಲ್ಲಿಯೇ ಈ ಉದ್ಯೋಗವನ್ನು ನಂಬಿ ಕರ್ತವ್ಯ ಮಾಡಿದ್ದಾರೆ. ಆದರೆ, ಕೇಂದ್ರ ಸರಕಾರ ಕೆಲವು ರಾಜ್ಯಗಳಲ್ಲಿ ಇಂದಿಗೂ ಸಾಕ್ಷರತಾ ಭಾರತ ಚಾಲ್ತಿಯಲ್ಲಿಟ್ಟು, ಕರ್ನಾಟಕ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸ್ಥಗಿತಗೊಳಿಸಿರುವುದು ಖಂಡನೀಯ ಎಂದರು.
1993 ರಿಂದ ಆರಂಭವಾದ ಹಲವು ಸರಕಾರಿ ಯೋಜನೆಗಳಲ್ಲಿ ನಿರಂತರವಾಗಿ ದುಡಿದುಕೊಂಡು ಬಂದ ಮಹಿಳೆಯರನ್ನು ಸರಕಾರ ಗುರುತಿಸದಿರುವುದು ವಿಪರ್ಯಾಸ ಸಂಗತಿಯಾಗಿದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹಲವಾರು ಬಾರಿ ಶಾಂತಿಯುತವಾದ ಹೋರಾಟ ನಡೆಸಿದರೂ ಸರಕಾರಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕು ಹಾಗೂ ಮರು ನೇಮಕ ಮಾಡುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬೇಡಿಕೆಗಳು: ಕೇರಳ ಸರಕಾರದ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ನಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡುವ ಹಾಗೂ ಮುಂದುವರಿಕೆ ಶಿಕ್ಷಣ ಕೇಂದ್ರವನ್ನು ಆರಂಭ ಮಾಡುವ ಮೂಲಕ ಪ್ರೇರಕ ಮತ್ತು ಸಂಯೋಜಕರನ್ನು ಮರು ನೇಮಕ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ಪ್ರೇರಕರನ್ನು ಹಾಗೂ ಸಂಯೋಜಕರನ್ನು ಗ್ರಾಮ ಪಂಚಾಯತ್ ನೌಕರರು ಎಂದು ಪರಿಗಣಿಸಬೇಕು. ವಿವಿಧ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಿಗೆ ಸಾಕ್ಷರ ಭಾರತ ಪ್ರೇರಕ ಅಥವಾ ಸಂಯೋಜಕರನ್ನು ನೇಮಕ ಮಾಡಬೇಕು. ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಪ್ರೇರಕ ಅಥವಾ ಸಂಯೋಜಕರಿಗೆ ವಿದ್ಯಾರ್ಹತೆ ಆಧಾರದ ಮೇಲೆ ಆದ್ಯತೆ ನೀಡಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.