ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಅಗತ್ಯ: ಡಾ.ಕೆ.ಶರೀಫಾ

Update: 2018-02-06 18:22 GMT

ಬೆಂಗಳೂರು, ಫೆ.6: ಲೈಂಗಿಕ ಅಲ್ಪಸಂಖ್ಯಾತರನ್ನು ನಮ್ಮವರು ಎಂದು ತಿಳಿದು, ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ಅಗತ್ಯ ಇದೆ ಎಂದು ಹಿರಿಯ ಸಾಹಿತಿ ಡಾ.ಕೆ.ಶರೀಫಾ ಹೇಳಿದರು.

ಮಂಗಳವಾರ ನಗರದ ಕನ್ನಡಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ‘ದೇಸಿ ಕಮ್ಮಟ, ಲೋಕ ಕಾಣದ ಲೋಕ’ ಕಾರ್ಯಕ್ರಮದಲ್ಲಿ ‘ಮಂಗಳಮುಖಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆಣ್ಣೋ ಅಥವಾ ಗಂಡೋ ಎನ್ನುವುದು ಮುಖ್ಯವಲ್ಲ. ಬದಲಾಗಿ ಎಲ್ಲರೂ ಮನುಷ್ಯರು ಎಂಬುದನ್ನು ಮನಗಾಣಬೇಕಿದೆ. ಅದೇರೀತಿ, ಲೈಂಗಿಕ ಅಲ್ಪಸಂಖ್ಯಾತರನ್ನು ಮುಖವಾಹಿನಿಗೆ ತೆಗೆದುಕೊಂಡು ಹೋಗಲು ಪ್ರಸ್ತುತ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಅಗತ್ಯವನ್ನು ನೆರವೇರಿಸಬೇಕು ಎಂದು ತಿಳಿಸಿದರು.

ಅಪರಾಧ ಪ್ರಕರಣಗಳನ್ನು ಮುಚ್ಚಿಹಾಕುವ ರಾಜಕಾರಣ ನಡೆಯುತ್ತಿದ್ದು, ಕೆಳ ವರ್ಗವನ್ನು ದಮನಕ್ಕೆ ತಳ್ಳುವಂಥ ಕಾರ್ಯವಾಗುತ್ತಿದೆ. ಮಂಗಳಮುಖಿಯರು ಮಾತ್ರವಲ್ಲದೆ, ಇಂದಿನ ಕಾನೂನು, ಪೊಲೀಸು, ರಾಜಕಾರಣದ ನಡುವೆ ಹೆಣ್ಣು ಸಿಲುಕಿ ನರಳುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.

ಸೆನ್ಸಾರ್ ಮಂಡಳಿ ಸದಸ್ಯೆ ಭಾರತಿ ಹೆಗಡೆ ಮಾತನಾಡಿ, ಅತ್ಯಾಚಾರಗಳು ರಾಜಕೀಯದ ಅಸ್ತ್ರವಾಗಿವೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಅತ್ಯಾಚಾರ ಪ್ರಕರಣಗಳನ್ನು ಬಳಸಿಕೊಂಡು ಕಾರ್ಯ ಸಾಧನೆ ಮಾಡಿಕೊಳ್ಳುತ್ತಾರೆ. ಅತ್ಯಾಚಾರಗಳಂತಹ ಪ್ರಕರಣಗಳಿಗೆ ಸೂಕ್ತ ನ್ಯಾಯಸಿಗಬೇಕು. ಹೀಗಾಗಿ, ಮಹಿಳೆಯರು ಚುನಾವಣೆಯಲ್ಲಿ ರಾಜಕೀಯ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಜಾಗೃತರಾಗಿರಬೇಕಾದ ರಿಸ್ಥಿತಿ ಉಂಟಾಗಿದೆ ಎಂದರು. ಅತ್ಯಾಚಾರಕ್ಕೂ ಉಡುಪುಗಳಿಗೂ ಸಂಬಂಧವಿದೆ ಎಂಬ ಮಾತು ಸೂಕ್ತವಲ್ಲ ಎಂದ ಅವರು, ಹೆಣ್ಣು ತನ್ನದಲ್ಲದ ತಪ್ಪಿಗಾಗಿ ಶೋಷಣೆಗೊಳಗಾಗುತ್ತಿರುವುದು ಖಂಡನೀಯ. ಹೀಗಾಗಿ, ಇದರಿಂದ ಹೊರಬಂದು ಘನತೆಯಿಂದ ಬದುಕು ನಡೆಸಲು ಸಂಘಟನೆ, ಹೋರಾಟ ಅವಶ್ಯಕವಾಗಿದೆ ಎಂದು ನುಡಿದರು.

ಪ್ರಸಕ್ತ ದಿನಗಳಲ್ಲಿ ಸಿನೆಮಾಗಳಲ್ಲಿ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವ ಹೆಣ್ಣಿನ ಚಿತ್ರಣದ ಬದಲು ದುರಂತಗಳನ್ನು ತೋರಿಸುವುದೇ ಹೆಚ್ಚು. ಪುರುಷರ ಅತ್ಯಾಚಾರದ ಮನೋಭಾವವನ್ನು ಕಿತ್ತು ಹಾಕಲು ಶಾಲಾ ಮಟ್ಟದಲ್ಲೇ ಶಿಕ್ಷಣ ನೀಡಬೇಕೋ ಅಥವಾ ಕಠಿಣ ಶಿಕ್ಷೆ ವಿಧಿಸಬೇಕೊ ಎಂಬುದರ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು.

ವಿಚಾರಗೋಷ್ಠಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಕಮ್ಮಟದ ನಿರ್ದೇಶಕಿ ಡಾ.ಎಂ.ಎಸ್. ಆಶಾದೇವಿ, ಸುಶೀಲ ಚಿಂತಾಮಣಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ, ಲೈಂಗಿಕ ಅಲ್ಪಸಂಖ್ಯಾತೆ ಚಾಂದಿನಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News