ಹಾಂಕಾಂಗ್ ವಿರುದ್ಧ ಭಾರತಕ್ಕೆ ಗೆಲುವು

Update: 2018-02-06 18:31 GMT

ಹಾಂಕಾಂಗ್, ಫೆ.6: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ನೇತೃತ್ವದ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಹಾಂಕಾಂಗ್ ವಿರುದ್ಧ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್‌ನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿದೆ.

ಭಾರತದ ಹಿರಿಯ ಆಟಗಾರ್ತಿ ಸೈನಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಸೈನಾ ಅನುಪಸ್ಥಿತಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಿದ ಸಿಂಧು ಮೊದಲಿಗೆ ಸಿಂಗಲ್ಸ್ ಪಂದ್ಯವನ್ನು, ಆ ಬಳಿಕ ಎನ್.ಸಿಕ್ಕಿ ರೆಡ್ಡಿ ಜೊತೆಗೂಡಿ ಮಹಿಳೆಯರ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಕಳೆದ ರವಿವಾರ ಇಂಡಿಯಾ ಓಪನ್ ಫೈನಲ್ ಸೋಲಿನ ಆಘಾತದಿಂದ ಬೇಗನೆ ಚೇತರಿಸಿಕೊಂಡಿರುವ ಸಿಂಧು ಟೂರ್ನಿಯ ಮೊದಲ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಹಾಂಕಾಂಗ್‌ನ ಯಿಪ್ ಪ್ಯೂ ಯಿನ್‌ರನ್ನು 21-12, 21-18 ಅಂತರದಿಂದ ಮಣಿಸಿದರು.

ಮೊದಲ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಪ್ರಜಕ್ತಾ ಸಾವಂತ್ 52 ನಿಮಿಷಗಳ ಹೋರಾಟದಲ್ಲಿ ವಿಂಗ್ ಯಂಗ್ ಹಾಗೂ ಯಿವುಂಗ್ ಟಿಂಗ್ ವಿರುದ್ಧ ಗೆಲುವಿಗಾಗಿ ತೀವ್ರ ಪೈಪೋಟಿ ನೀಡಿದರು. ಆದರೆ, 22-20, 20-22, 10-21 ಗೇಮ್‌ಗಳಿಂದ ಸೋತಿದ್ದಾರೆ.

 ಯುವ ಆಟಗಾರ ಕೃಷ್ಣ ಪ್ರಿಯ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಚೆವುಂಗ್ ಯಿಂಗ್ ಮೀ ವಿರುದ್ಧ 19-21, 21-18, 20-22 ಗೇಮ್‌ಗಳಿಂದ ಸೋತಿದ್ದಾರೆ. ಆಗ ಭಾರತ 5 ಪಂದ್ಯಗಳಲ್ಲಿ 1-2 ಹಿನ್ನಡೆ ಕಂಡಿತು. ಆಗ ಸಿಂಧು ಅವರು ಸಿಕ್ಕಿ ಜೊತೆಗೂಡಿ ಯಾವು ಹಾಗೂ ಯುಯೆನ್ ಸಿನ್ ಯಿಂಗ್ ವಿರುದ್ಧ 21-15, 15-21, 21-14 ಗೇಮ್‌ಗಳಿಂದ ಜಯ ಸಾಧಿಸಿ ಭಾರತ 2-2 ರಿಂದ ಸಮಬಲ ಸಾಧಿಸಲು ನೆರವಾದರು.

ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಋಥ್ವಿಕಾ ಶಿವಾನಿ ಮೊದಲ ಗೇಮ್ ಸೋಲಿನಿಂದ ಚೇತರಿಸಿಕೊಂಡು ಯೆವುಂಗ್ ಸಮ್ ಯೀರನ್ನು 16-21, 21-16, 21-13 ಗೇಮ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಭಾರತಕ್ಕೆ ನಿರ್ಣಾಯಕ ಮುನ್ನಡೆ ಒದಗಿಸಿಕೊಟ್ಟರು.

ಏಷ್ಯನ್ ಟೀಮ್ ಚಾಂಪಿಯನ್‌ಶಿಪ್ ಮೇನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಉಬೆರ್ ಕಪ್ ಫೈನಲ್‌ಗೆ ಅರ್ಹತಾ ಟೂರ್ನಿಯಾಗಿದೆ.

ಭಾರತ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಜಪಾನ್ ತಂಡವನ್ನು ಎದುರಿಸಲಿದೆ. ಜಪಾನ್ ತಂಡದಲ್ಲಿ ವಿಶ್ವದ ನಂ.2ನೇ ಆಟಗಾರ್ತಿ ಅಕಾನೆ ಯಮಗುಚಿ ಹಾಗೂ ಹಾಲಿ ವಿಶ್ವ ಚಾಂಪಿಯನ ನೊರೊಮಿ ಒಕುಹರಾ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News