ಗೌರಿ ಲಂಕೇಶ್ ಅಭಿಮಾನಿಗಳಲ್ಲೊಂದು ವಿನಂತಿ

Update: 2018-02-06 18:39 GMT

ಮಾನ್ಯರೇ,

ಗೌರಿ ಲಂಕೇಶರಿಗೆ ಯಾರೂ ವೈಯುಕ್ತಿಕ ವೈರಿಗಳಿರಲಿಲ್ಲ. ಅವರ ಉದಾತ್ತ ಚಿಂತನೆ, ತತ್ವ-ಸಿದ್ಧಾಂತ, ಧ್ಯೇಯೋದ್ದೇಶ, ಆಶಯಗಳನ್ನು ಅರ್ಥ ಮಾಡಿಕೊಳ್ಳದ ಕೆಲವೇ ಜನ ಇದ್ದಿರಬಹುದು ಅಷ್ಟೇ. ಗೌರಿಯವರನ್ನು ಭೌತಿಕವಾಗಿ ನಾವು ಕಳೆದುಕೊಂಡು ಐದು ತಿಂಗಳಾಯಿತು. ಈ ಅವಧಿಯಲ್ಲಿ ಗೌರಿಯವರನ್ನು ಸಮಾಧಿ ಮಾಡಲಿಲ್ಲ ಅವರನ್ನು ಬಿತ್ತಿ ಬೆಳಸಲಾಯಿತು. ಅದರ ಪರಿಣಾಮವೇ ಇಡೀ ಭಾರತದ ಪ್ರಗತಿಪರ ಚಿಂತಕರು ಮತ್ತು ಗೌರಿಯ ತತ್ವ ಸಿದ್ಧಾಂತ, ಧ್ಯೇಯ, ಆಶಯಗಳಲ್ಲಿ ನಂಬಿಕೆ ಇರಿಸಿದ್ದ ಸಹೃದಯರು ಕೂಡಿ ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್. ಎಸ್. ದೊರೆಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿರುವುದೇ ಈ ಗೌರಿ ಸ್ಮಾರಕ ಟ್ರಸ್ಟ್. ಗೌರಿಯನ್ನು ಕೊಂದ ಶಕ್ತಿಗಳಿಗೆ ಗೌರಿಯ ಧ್ವನಿಯನ್ನು ಸುಮ್ಮನಾಗಿಸಲು ಸಾಧ್ಯವಿಲ್ಲವೆಂದೂ ಮತ್ತು ಅದು ಮತ್ತಷ್ಟು ಸಶಕ್ತವಾಗಿ ಹೊಸ ಸ್ಫೂರ್ತಿಯೊಂದಿಗೆ ಹೊರಹೊಮ್ಮುತ್ತದೆ ಎಂದು ಸಾರುವ ವಿಧಾನವಾಗಿ ಈ ಟ್ರಸ್ಟ್ ಹಲವಾರು ಉದಾತ್ತ ಜನಪರ ಉದ್ದೇಶಗಳನ್ನು ಹೊಂದಿದೆ. ಅದರಲ್ಲಿ ಒಂದು ಗೌರಿಯವರ ಆಶಯ ಮತ್ತು ಮಾನವೀಯ ಮೌಲ್ಯಗಳನ್ನು ಮುಂದುವರಿಸುವಂತಹ ನಿಯತಕಾಲಿಕೆಯನ್ನು ಪ್ರಕಟಿಸುವುದು.

ಆ ಪ್ರಯುಕ್ತ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯ ವಿಶ್ಲೇಷನಾತ್ಮಕ ಮತ್ತು ಗಂಭೀರ ಲೇಖನಗಳುಳ್ಳ ಒಂದು ವಾರ ಪತ್ರಿಕೆಯನ್ನು ‘ನಮ್ಮ ಗೌರಿ’ ಹೆಸರಲ್ಲಿ ಮಾರ್ಚ್ 8ರಂದು ಹೊರ ತರುವ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ. ಜಾಹೀರಾತಿಲ್ಲದೆ, ಬಂಡವಾಳಶಾಹಿಗಳ ಸ್ಪಾನ್ಸರ್‌ಶಿಪ್ ಇಲ್ಲದೆ, ಯಾವುದೇ ಸ್ಥಾಪಿತ ಹಿತಾಸಕ್ತಿಗಳಿಗೆ ಬಲಿಯಾಗದೆ, ರಾಜಕೀಯ ಪ್ರಭುತ್ವದ ಮರ್ಜಿ ಇಲ್ಲದೇ ಜನಪರ ನಿಲುವುಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಪರಂಪರೆಯನ್ನು ಮುಂದುವರಿಸುವ ವಾರಪತ್ರಿಕೆಯಾಗಿ ಹೊರಬರಲಿದ್ದು, ಈ ಪತ್ರಿಕೆ ಗೌರಿಯವರ ಲಂಕೇಶ್‌ಮೀಡಿಯಾದಲ್ಲಿ ಮೊದಲಿದ್ದ ಯಾವುದೇ ಸೌಕರ್ಯಗಳನ್ನು ಉಪಯೋಗಿಸುವುದಿಲ್ಲವಾದ ಕಾರಣ ಎಲ್ಲವನ್ನೂ ಹೊಸದಾಗಿ ಸ್ವಂತ ಖರ್ಚಿನಿಂದ ಹೊಂದಿಸಿಕೊಂಡು ಪತ್ರಿಕೆ ಪ್ರಾರಂಭಿಸ ಬೇಕಾಗಿರುವುದರಿಂದ, ಆ ನಿಟ್ಟಿನಲ್ಲಿ ಈ ಟ್ರಸ್ಟ್ ಗೌರಿ ಲಂಕೇಶ್ ಓದುಗ ಬಳಗದ ಸಹಕಾರ ಬಯಸುತ್ತಿದೆ. ಮೊದಲಿಗೆ ಓದುಗರನ್ನು ಎರಡು ವರ್ಷದ ಚಂದಾದಾರ ಆಗುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದು, ಗೌರಿಯಕ್ಕನ ಆಶಯಗಳನ್ನು ಗೌರವಿಸುವ ಆಸಕ್ತರು ತಮ್ಮ ಚಂದಾದಾರಿಕೆಗಾಗಿ ಗೌರಿ ಲಂಕೇಶ್ ಬಳಗ, ಮಂಗಳೂರು ಘಟಕದ ಈ ಕೆಳಗಿನವರನ್ನು ಸಂಪರ್ಕಿಸಬಹುದು.

ಸುರೇಶ್ ಭಟ್ ಬಾಕ್ರಬೈಲ್ (8424-2225652), ಇಸ್ಮತ್ ಪಜೀರ್ (9880984288), ಗುಲಾಬಿ ಬಿಳಿಮಲೆ/ಶ್ರೀನಿವಾಸ್ ಕಾರ್ಕಳ (8867367371), ಪ್ರವೀಣ್ ಶೆಟ್ಟಿ (9900555161,)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News