ಮತ ತಂದುಕೊಡುವ ಶಕ್ತಿ ಇರುವುದು ಸಿದ್ದರಾಮಯ್ಯ, ಬಿಎಸ್‌ವೈ, ದೇವೇಗೌಡರಿಗೆ ಮಾತ್ರ: ಕೆ.ಎನ್.ರಾಜಣ್ಣ
ಬೆಂಗಳೂರು, ಫೆ. 7: ‘ಮತಗಳನ್ನು ತಂದುಕೊಡುವ ಶಕ್ತಿ ಇರುವ ನಾಯಕರೆಂದರೆ ಬಿಜೆಪಿಯಲ್ಲಿ ಯಡಿಯೂರಪ್ಪ, ಜೆಡಿಎಸ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಮೇಲೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದರು.
ಬಿಎಸ್‌ವೈ ಫೋಟೋ ಇಟ್ಟು ಭಿಕ್ಷೆ: ಇದೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಶೆಟ್ಟರ್, ‘ನಿಮ್ಮ ಪಕ್ಷಕ್ಕೆ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸುವ ತಾಕತ್ತಿಲ್ಲ’ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ‘ಗ್ರಾಮೀಣ ಪ್ರದೇಶದಲ್ಲಿ ಶನಿ ಮಹಾತ್ಮನ ಫೋಟೋ ಇಟ್ಟುಕೊಂಡು ಭಿಕ್ಷೆ ಕೇಳುವಂತೆ ಬಿಜೆಪಿಯವರು ಯಡಿಯೂರಪ್ಪ ಫೋಟೋ ಮುಂದಿಟ್ಟುಕೊಂಡು ಮತ ಭಿಕ್ಷೆಗೆ ಮುಂದಾಗಿದ್ದಾರೆ’ ಎಂದು ಲೇವಡಿ ಮಾಡಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಗದ್ದಲ ಸೃಷ್ಟಿಸಿದರು. ‘ಸಿಎಂ ಅಭ್ಯರ್ಥಿ ಘೋಷಿಸುವ ತಾಕತ್ತಿಲ್ಲದ ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಲ್ಲಿದೆ’ ಎಂದು ಗೋವಿಂದ ಕಾರಜೋಳ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆಂಜನೇಯ, ‘ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲೇ ಚುನಾವಣೆ ನಡೆಯಲಿದ್ದು, ಅವರೇ ಮತ್ತೊಮ್ಮೆ ಸಿಎಂ ಆಗಲಿದ್ದಾರೆ’ ಎಂದರು.
ಆ ಬಳಿಕ ಮಾತು ಮುಂದುವರಿಸಿದ ರಾಜಣ್ಣ, ‘ನಗರದಲ್ಲಿ ಇತ್ತಿಚೆಗೆ ನಡೆದ ಸಮಾವೇಶದಲ್ಲಿ ಬಿಜೆಪಿ ಗೆಲ್ಲಿಸಿದರೆ ಕರ್ನಾಟಕಕ್ಕೆ 1ಲಕ್ಷ ಕೋಟಿ ರೂ.ನೀಡುವ ಘೋಷಣೆ ಮಾಡಿದ್ದು ಸಲ್ಲ’ ಎಂದು ಆಕ್ಷೇಪಿಸಿದರು. ಈ ಹೇಳಿಕೆಗೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, ಮೋದಿಯವರು ಆ ರೀತಿ ಯಾವುದೇ ಹೇಳಿಕೆ ನೀಡಿಲ್ಲ ಎಂದರು. ‘ನನ್ನ ಬಳಿ ದಾಖಲೆ ಇದೆ, ಮೋದಿ ಆ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ರಾಜಣ್ಣ ಸವಾಲು ಹಾಕಿದರು.
ಜೈಲು-ಗಡಿಪಾರು: ‘ನ್ಯಾಯಾಂಗ ವ್ಯವಸ್ಥೆಯಲ್ಲಿ ದಂಗೆ ಏಳುವ ಸ್ಥಿತಿ ನಿರ್ಮಿಸಿದ್ದು ಕೇಂದ್ರ ಸರಕಾರ. ಆ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಮೇಲಿನ ಆರೋಪಕ್ಕೆ ಸಂಬಂಧದ ಪ್ರಕರಣವೊಂದರ ವಿಚಾರಣೆಯನ್ನು ಪೀಠ ವರ್ಗಾವಣೆ ಮಾಡಲಾಗಿತ್ತು. ನ್ಯಾ.ಲೋಯ ಅವರ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ನ್ಯಾಯಾಧೀಶರೇ ಸುದ್ದಿಗೋಷ್ಠಿ ನಡೆಸಿದ್ದಾರೆ’ ಎಂದು ರಾಜಣ್ಣ ಬಿಜೆಪಿ ಸದಸ್ಯರ ಕಾಲೆಳೆದರು.
‘ಬಿಜೆಪಿ ರಾಷ್ಟ್ರೀಯಾಧ್ಯಕ್ಷರು ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದು, ಗಡಿಪಾರು ಕೂಡ ಆಗಿದ್ದರು’ ಎಂದು ರಾಜಣ್ಣ ಉಲ್ಲೇಖಿಸಿದರು. ಇದರಿಂದ ಕೆರಳಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ಮನೆಯ ಸದಸ್ಯರಲ್ಲದ ವ್ಯಕ್ತಿಗಳ ಹೆಸರು ಉಲ್ಲೇಖ ಸರಿಯಲ್ಲ ಎಂದು ಕ್ರಿಯಾಲೋಪ ಎತ್ತಿದರು.
ಈ ವೇಳೆ ಪೀಠದಲ್ಲಿ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ರೂಲಿಂಗ್ ಕಾಯ್ದಿರಿಸಿದ್ದೇನೆ. ಆ ವಿಚಾರ ಪ್ರಸ್ತಾಪಿಸದೆ ರಾಜ್ಯಪಾಲರ ಭಾಷಣದ ಮೇಲೆ ಅಷ್ಟೇ ಸೀಮಿತವಾಗಿ ಮಾತನಾಡಿ ಎಂದು ರಾಜಣ್ಣ ಅವರಿಗೆ ಸೂಚಿಸಿದರು. ‘ನಿನ್ನೆಯೆಷ್ಟೇ ಕಾನೂನು ಸುವ್ಯವಸ್ಥೆಯ ಬಗ್ಗೆ ಬಿಜೆಪಿ ಸದಸ್ಯರು ಸುದೀರ್ಘ ಚರ್ಚೆ ಮಾಡಿದ್ದಾರೆ. ಹೀಗಾಗಿ ನಾವು ಚರ್ಚೆ ಮಾಡಬೇಕಾಗುತ್ತದೆ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಪಿ.ಎಂ.ನರೇಂದ್ರಸ್ವಾಮಿ, ‘ಬಿಜೆಪಿಯವರಿಗೆ ಸಂವಿಧಾನ-ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಅವರಿಗೆ ಅಂಬೇಡ್ಕರ್ ಸಂವಿಧಾನ ಬೇಡ. ಬದಲಿಗೆ ಮನುಧರ್ಮ ಅನುಷ್ಠಾನಕ್ಕೆ ಹೊರಟಿದ್ದಾರೆ’ ಎಂದು ಹೇಳಿದರು.
‘ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರ ಅಂತ್ಯ ಸಂಸ್ಕಾರಕ್ಕೆ ಜಾಗವನ್ನೂ ನೀಡಲಿಲ್ಲ. ಇವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಬಿಜೆಪಿಯ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಆಡಳಿತ ಪಕ್ಷದ ಸದಸ್ಯರಿಗೆ ತಿರುಗೇಟು ನೀಡಿದರು.
ಹೆಣದ ಮೇಲೆ ರಾಜಕೀಯ: ‘ನಿನ್ನೆ ಸಂಸತ್‌ನಲ್ಲಿ ಸಂಸದರೊಬ್ಬರು ಚಿಕನ್ ತಿಂದರೆ ಚಿಕನ್ ಪಾರ್ಟಿ, ಮಟನ್ ತಿಂದರೆ ಮಟನ್ ಪಾರ್ಟಿ, ಮನುಷ್ಯರನ್ನು ತಿಂದರೆ ಅದು ಕಾಂಗ್ರೆಸ್ ಪಾರ್ಟಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹೆಣದ ಮೇಲೆ ರಾಜಕೀಯ ಮಾಡುತ್ತಿರುವವರ್ಯಾರು?’ ಎಂದು ರಾಜಣ್ಣ ಪ್ರಶ್ನಿಸಿದರು.
‘ಸಾಲಮನ್ನಾ ಘೋಷಣೆಗೆ ನನ್ನ ವಿರೋಧವಿದೆ. ಇದರಿಂದ ಕೆಲ ರೈತರಿಗಷ್ಟೇ ಅನುಕೂಲ ಆಗಲಿದೆ. ಆದುದರಿಂದ ಮಳೆ ಆಶ್ರಿತ ಪ್ರದೇಶದ ರೈತರಿಗೆ ಎಕರೆಗೆ ಇಂತಿಷ್ಟು ಅಂತ ಪರಿಹಾರ ನೀಡಬೇಕು. ಸಾಲಮನ್ನಾ ಪದ ಬಳಕೆಯೂ ಸರಿಯಲ್ಲ. ರೈತರ ಸಾಲದ ಮೊತ್ತ ಸರಕಾರ ಭರಿಸುತ್ತದೆ ಎಂದು ಬದಲಾವಣೆ ಮಾಡಬೇಕು’
-ಕೆ.ಎನ್.ರಾಜಣ್ಣ ಆಡಳಿತ ಪಕ್ಷದ ಸದಸ್ಯ