ರಾಜ್ಯದಲ್ಲಿ ಕೋಮುವಾದಿ ಪಕ್ಷಕ್ಕೆ ಅವಕಾಶವಿಲ್ಲ: ಎನ್.ರವಿ
ಬೆಂಗಳೂರು, ಫೆ.07: ಕರ್ನಾಟಕದಲ್ಲಿ ಶರಣರು, ದಾಸರು, ಸೂಫಿಗಳು ಜಾತ್ಯತೀತ ಬೀಜವನ್ನು ಬಿತ್ತಿ ಹೋಗಿದ್ದಾರೆ. ಹೀಗಾಗಿ ರಾಜ್ಯದ ಜನತೆ ಕೋಮುವಾದಿ ಶಕ್ತಿಗಳಿಗೆ ರಾಜ್ಯಾಧಿಕಾರ ಕೊಡಲು ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲವೆಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಎನ್.ರವಿ ಹೇಳಿದರು.
ಬುಧವಾರ ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಮತೀಯ ಶಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಜನರ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಇಂತಹ ಶಕ್ತಿಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತರ ಸಾಲ ಮನ್ನಾ, ಅನ್ನ ಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನತೆ ಮತ್ತೊಮ್ಮೆ ಅಧಿಕಾರಕ್ಕೆ ತರುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ತಿಳಿಸಿದರು.
ಹಲವು ಪ್ರಥಮಗಳ ರಾಜ್ಯ: ರೈತರಿಗೆ 5ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ, ದೇಶದಲ್ಲೆ ದೊಡ್ಡ ಪ್ರಮಾಣದಲ್ಲಿ ಪಾವಗಡದಲ್ಲಿ ಸೌರವಿದ್ಯುತ್ ಉತ್ಪಾದನೆ, ಇಂದಿರಾ ಕ್ಯಾಂಟಿನ್, ಕ್ಷೀರ ಧಾರೆಯಲ್ಲಿ 5ರೂ. ಪ್ರೋತ್ಸಾಹ ಧನ, ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ರಾಜ್ಯ ಸರಕಾರದ ಹತ್ತು ಹಲವು ಕಾರ್ಯಕ್ರಮಗಳು ದೇಶದಲ್ಲೇ ಪ್ರಥಮವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ರಾಜ್ಯಪಾಲ ವಜುಭಾಯಿ ವಾಲಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಾತಿ, ಧರ್ಮ, ಪ್ರಾದೇಶಿಕವಾಗಿ ಭೇದ ಭಾವ ಮಾಡದೆ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.