ಬೆಂಗಳೂರು: ಬಿಸಿಯೂಟ ನೌಕರರ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ

Update: 2018-02-07 15:49 GMT

*4 ಮಂದಿ ನೌಕರರು ಅಸ್ವಸ್ಥ
*ಸಭೆ ಕರೆದು ಚರ್ಚೆ ಮಾಡುವವರೆಗೂ ಧರಣಿ ಮುಂದುವರಿಕೆ

ಬೆಂಗಳೂರು, ಫೆ.7: ರಾತ್ರಿ ಪೂರ್ತಿ ಊಟ, ತಿಂಡಿ, ನೀರು, ನಿದ್ದೆಯಿಲ್ಲದೆ ಕೊರೆಯುವ ಚಳಿಯಲ್ಲಿ ನೂರಾರು ಮಹಿಳೆಯರು ನಡುರಸ್ತೆಯಲ್ಲಿ ಮಲಗಿದ್ದೆವು, ಆದರೆ ಸರಕಾರದ ಯಾವೊಬ್ಬ ಪ್ರತಿನಿಧಿಗೂ ನಮ್ಮ ನೋವಿಗೆ ಸ್ಪಂದಿಸಲು ಮನಸ್ಸಿಲ್ಲ ಎಂದು ಪ್ರತಿಭಟನಾ ನಿರತ ಬಿಸಿಯೂಟ ನೌಕರರು ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಕನಿಷ್ಠ ವೇತನ, ಉದ್ಯೋಗ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ವತಿಯಿಂದ ಬಿಸಿಯೂಟ ನೌಕರರು ಮಂಗಳವಾರದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನೌಕರರು ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನದ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಸಚಿವ ತನ್ವೀರ್ ಸೇಠ್, ಮುಖ್ಯಮಂತ್ರಿ, ಆರ್ಥಿಕ ಇಲಾಖಾಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ್ದರು. ಸಂಜೆವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಧರಣಿ ಮುಂದುವರಿಸಿದ್ದೆವು. ಆದರೆ, ಎರಡನೇ ದಿನವೂ ಸರಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಎಐಟಿಯುಸಿ ಗೌರವಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

4 ಮಂದಿ ಅಸ್ವಸ್ಥ: ರಾತ್ರಿಯಿಡೀ ಚಳಿಯಿಂದ ನಡುಗಿ, ಸರಿಯಾದ ಊಟ, ನಿದ್ದೆಯಿಲ್ಲದ ಪರಿಣಾಮ ಬುಧವಾರ ನಾಲ್ಕು ಮಂದಿ ಅಸ್ವಸ್ಥಗೊಂಡು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಎರಡು ದಿನಗಳಲ್ಲಿ ಒಟ್ಟಾರೆ 11 ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಬೇಡಿಕೆಗಳು: ಕನಿಷ್ಠ ವೇತನ ಜಾರಿ ಮಾಡಬೇಕು. ಬಿಸಿಯೂಟ ನೌಕರರನ್ನು ಸಂಘಟಿತ ಕಾರ್ಮಿಕರೆಂದು ಪರಿಗಣಿಸಬೇಕು. ಮಹಿಳೆಯರಿಗೆ ಕನಿಷ್ಠ ವೇತನ ನೀಡಬೇಕು. ಶಾಶ್ವತ ಅಂಗವಿಕಲತೆಗೆ 1.5 ಲಕ್ಷ ಪರಿಹಾರ ಧನ, ವಿಮಾ ಯೋಜನೆ ಜಾರಿ ಮಾಡಬೇಕು. ವಾರ್ಷಿಕ 30 ದಿನ ರಜೆ ನೀಡಬೇಕು. ಬಿಸಿಯೂಟ ಸಹಾಯಕರನ್ನು ಶಿಕ್ಷಣ ಇಲಾಖೆಯಡಿ ತರಬೇಕು. ಮಾಸಿಕ 5ನೇ ತಾರೀಖಿನೊಳಗೆ ವೇತನ ನೀಡಬೇಕು.

ಮುಖ್ಯಮಂತ್ರಿಗಳು ನಮ್ಮನ್ನು ಚರ್ಚೆಗೆ ಕರೆಯಲಿಲ್ಲ. ಎರಡು ದಿನಗಳಿಂದ ಹೆಣ್ಣು ಮಕ್ಕಳು ರಸ್ತೆಯಲ್ಲೇ ಕೂತು ಪ್ರತಿಭಟನೆ ನಡೆಸುತ್ತಿದ್ದರೂ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿಗಳು ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಹೋಗಿದ್ದಾರೆ. ಅವರು ಬಂದು ನಮ್ಮನ್ನು ಸಭೆ ಕರೆದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ಮುಂದುವರಿಸುತ್ತೇವೆ
-ಎಚ್.ಕೆ.ರಾಮಚಂದ್ರಪ್ಪ, ಗೌರವಾಧ್ಯಕ್ಷ ಎಐಟಿಯುಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News