ಸರಕಾರಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ: ಕಾಗೋಡು ತಿಮ್ಮಪ್ಪ

Update: 2018-02-07 15:52 GMT

ಬೆಂಗಳೂರು, ಫೆ. 7: ಕೆಂಗೇರಿ ಹೋಬಳಿ ಪಂತರಪಾಳ್ಯ ಗ್ರಾಮದಲ್ಲಿ 24 ಎಕರೆ 37 ಗುಂಟೆ ಸರಕಾರಿ ಭೂಮಿಗೆ ಸಂಬಂಧಪಟ್ಟಂತೆ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆದಿದ್ದು, ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 24 ಎಕರೆ 37 ಗುಂಟೆ ಸರಕಾರಿ ಕರಾಬು ಜಮೀನಿನ ವಿವಾದದಲ್ಲಿ ನ್ಯಾಯಾಲಯ, ಸರಕಾರದ ಪರವಾಗಿ ತೀರ್ಪು ನೀಡಿದೆ. ಅಲ್ಲದೆ, ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಸೂಚನೆ ನೀಡಿದೆ. ಆದರೂ ಅಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇಂದೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದರು. ಪಿ.ಆರ್.ರಮೇಶ್ ಮಾತನಾಡಿ, 250 ಕೋಟಿ ರೂ. ಮೌಲ್ಯದ ಈ ಆಸ್ತಿ ಸರಕಾರಕ್ಕೆ ಸೇರಿದ್ದು ಎಂದು ನ್ಯಾಯಾಲಯವೇ ಹೇಳಿದೆ. ಆದರೆ ಈ ಜಾಗದಲ್ಲಿ ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡುತ್ತಿಲ್ಲ. ಪ್ರತಿದಿನ ಅಲ್ಲಿ ಮಣ್ಣಿನ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ದಿನವೊಂದಕ್ಕೆ 2.5 ಲಕ್ಷ ರೂ. ಪಡೆಯಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News