ದಲಿತ ಸಾಹಿತಿಗಳ ಬರಹ ಅವರ ಅಸ್ತಿತ್ವದ ಹೋರಾಟ: ಎಚ್.ಎಸ್.ವೆಂಕಟೇಶಮೂರ್ತಿ

Update: 2018-02-07 16:07 GMT

ಬೆಂಗಳೂರು, ಫೆ.7: ದಲಿತ ಕವಿ, ಲೇಖಕರ ಬರಹ ಅವರ ಅಸ್ತಿತ್ವದ ಹೋರಾಟ. ಅದು ಅವರ ಅಂತರಂಗದ ಆಳ ಹಾಗೂ ನೋವನ್ನು ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ಡಾ.ಜಿ.ಎಸ್.ಎಸ್.ವಿಶ್ವಸ್ಥ ಮಂಡಲಿ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ವತಿಯಿಂದ ನಗರದ ಸೆನೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್.ಎಸ್.ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶ್ರೀ ನಾಗ ಐತಾಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ಲೇಖಕ ಮೊಗಳ್ಳಿ ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಾಜದ ಇತರೆ ಜನಾಂಗ ಹಾಗೂ ತಮ್ಮ ನಡುವೆ ಇರುವ ಸಂಘರ್ಷವನ್ನು ಹೋಗಲಾಡಿಸಲು ಹೊರಬರುತ್ತಿರುವ ಬರಹ ಅವರುಗಳದ್ದು. ಕರುಳು ಕಿತ್ತುಬರುವ, ರಕ್ತಸಿಕ್ತವಾಗಿರುವ ಅವರ ಭಾಷೆಯನ್ನು ಗಮನಿಸಿದರೆ ಅವರ ನೋವು ಗಮನಕ್ಕೆ ಬರುತ್ತದೆ. ಅದು ಅಭಿವ್ಯಕ್ತಿ ಅಲ್ಲ, ಸಂಘರ್ಷದ ವಿರುದ್ಧ ಕೂಗಿನ ಬರವಣಿಗೆ. ಅವರು ಅನುಭವಿಸುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಷ್ಠುರತೆಯನ್ನು ಆ ಬರಹ ಬಿಂಬಿಸುತ್ತದೆ ಎಂದರು.

ತಮ್ಮದೇ ಆದ ಜಗತ್ತನ್ನು ತಮ್ಮ ಭಾಷೆಯಲ್ಲೇ ಹೇಳುವ ಮೂಲಕ ತಮ್ಮ ನೋವುಗಳನ್ನು ವ್ಯಕ್ತಪಡಿಸುತ್ತಾರೆ ದಲಿತ ಸಾಹಿತಿ, ಕವಿಗಳು. ಅದರಲ್ಲಿ ಸಾಹಿತಿ ದೇವನೂರ ಮಹಾದೇವ, ಕವಿ ಸಿದ್ದಲಿಂಗಯ್ಯ ಅವರಂತೆಯೇ ಮೊಗಳ್ಳಿ ಅವರದ್ದೂ ಕಠಿಣ ಭಾಷೆಯಾಗಿದ್ದು, ಅಲ್ಲಿ ತಮ್ಮ ನೋವನ್ನು ತೋರ್ಪಡಿಸುತ್ತಾರೆ. ಆ ಭಾಷೆಯಿಂದಲೇ ಅವರ ನೋವು ಅರಿವಿಗೆ ಬರುತ್ತದೆ, ಈ ಮೂಲಕ ಅವರು ಅದನ್ನು ಸಮಾಜದ ಮುಂದೆ ತೆರೆದಿಟ್ಟವರು. ಅವರ ಸಂವೇದನೆ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ ಎಂದು ನುಡಿದರು

ಸಾಹಿತಿ ಡಾ.ಮರುಳಸಿದ್ದಪ್ಪ ಮಾತನಾಡಿ, ಅನಿಸಿದ್ದನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳಬೇಕು, ಜನಪ್ರಿಯತೆ ಬಯಸದೇ ಇರುವವರು ಮುಖ್ಯವಾಗುತ್ತಾರೆ. ಕನ್ನಡದಲ್ಲಿ ಎಲ್ಲವನ್ನೂ ಕಠೋರವಾಗಿ ಬರೆಯುವವರ ಸಂಖ್ಯೆ ಕಡಿಮೆ ಇದ್ದು, ಅಂತಹವರನ್ನು ಗುರುತಿಸಬೇಕು. ಅಂತಹವರಲ್ಲಿ ಮೊಗಳ್ಳಿ ಒಬ್ಬರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ.ಎಸ್.ಎಸ್. ವಿಶ್ವಸ್ಥ ಮಂಡಲಿ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಎಚ್.ದಂಡಪ್ಪ, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಶೂದ್ರ ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News