ಬೆಂಗಳೂರು: ಮಲಹೊರುವ ಪದ್ಧತಿ ತಡೆಗೆ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ರ‍್ಯಾಲಿ

Update: 2018-02-07 17:02 GMT

ಬೆಂಗಳೂರು, ಫೆ.7: ಮಲಹೊರುವ ಪದ್ಧತಿಗೆ ಸಿಲುಕಿರುವವರಿಗೆ ಪುನರ್ವಸತಿ ಕಲ್ಪಿಸಬೇಕು ಹಾಗೂ ಈ ಪದ್ಧತಿಯನ್ನು ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದ-ಲೆನಿನ್‌ವಾದ, ಲಿಬರೇಷನ್) ಸಂಘಟನೆಯ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.

ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಈ ವೇಳೆ ಕೂಡಲೇ ಸರಕಾರ ಮಲಹೊರುವ ಪದ್ಧತಿ ನಿಲ್ಲಿಸಲು ಕಠಿಣ ಕಾನೂನುಗಳನ್ನು ಜಾರಿ ಮಾಡಬೇಕು. ಎಲ್ಲರಿಗೂ ಸಮಗ್ರ ಪುನರ್ವಸತಿ ಕಲ್ಪಿಸಬೇಕು ಎಂದು ಘೋಷಣೆಗಳು ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ಎಸ್.ಬಾಲನ್, ಮಲಗುಂಡಿ, ಸೆಪ್ಟಿಕ್ ಟ್ಯಾಂಕ್ ಹಾಗೂ ಎಸ್‌ಟಿಪಿ ಒಳಗೆ ಇಳಿಸಿ ದಲಿತರನ್ನು ಕೊಲೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕಳೆದೆರಡು ದಶಕಗಳಲ್ಲಿ ಮಲ ಹೊರುವ ಪದ್ಧತಿಯಿಂದಾಗಿ 75 ಕ್ಕೂ ಅಧಿಕ ಅಮಾನವೀಯ ಕೊಲೆಗಳು ನಡೆದಿದ್ದು, ಇಲ್ಲಿ ಅಧಿಕಾರ ನಡೆಸಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೇ ಈ ಕೊಲೆಗಳಿಗೆ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಆದರೂ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಮಾಯಕರು ಮಾತ್ರ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಸಿಎಂ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದಲ್ಲಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ, ಇಂದಿಗೂ ಇಲ್ಲಿ ಬರೀ ಕೈಯಲ್ಲಿ ಮಲಗುಂಡಿಗಳನ್ನು ಸ್ವಚ್ಛ ಮಾಡುವ ಪದ್ಧತಿ ದೂರವಾಗಿಲ್ಲ. ಮಲಗುಂಡಿ, ಎಸ್‌ಟಿಪಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸದಿರುವುದು ಮತ್ತು ದಲಿತರನ್ನು ಗುಲಾಮರನ್ನಾಗಿ ನೋಡುವ ಸರಕಾರ ವ್ಯವಸ್ಥೆಯೇ ಈ ಕಾರ್ಮಿಕರ ಮರಣಕ್ಕೆ ಮೂಲ ಕಾರಣವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಉತ್ತರ ಪ್ರದೇಶದ 300 ದಲಿತರನ್ನು ಕರೆದುಕೊಂಡು ಬಂದು ಅವರ ಕೈನಲ್ಲಿ ಮಲ ಹೊರಿಸುವ ಯೋಜನೆ ರೂಪಿಸಿದ್ದಾರೆ. ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿ, ಯಾವುದೇ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಈ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಕೂಡಲೇ ಜಿಲ್ಲಾಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಮಲಗುಂಡಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಸಾವಿಗೀಡಾಗುತ್ತಿರುವ ಶೇ.95 ರಷ್ಟು ಜನರು ದಲಿತರಾಗಿದ್ದಾರೆ. ಸರಕಾರ ಹಾಗೂ ಸಮಾಜ ಇಂದಿಗೂ ದಲಿತರು ನಮ್ಮ ಹಾಗೆ ಮನುಷ್ಯರು ಎಂಬ ಮಾನವೀಯ ಮೌಲ್ಯವನ್ನು ಬೆಳೆಸಿಕೊಂಡಿಲ್ಲ ಎಂದ ಅವರು, ಮಲಹೊರುವ ಪದ್ಧತಿ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಹಾಗೂ ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿ 2013 ರಲ್ಲಿ ಕಾನೂನನ್ನು ಜಾರಿ ಮಾಡಲಾಗಿದೆ. ಆದರೆ, ದಿನನಿತ್ಯ ಈ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಮೈತ್ರೀಯ, ನಿರ್ಮಲ, ಕ್ಲಿಪ್ಟನ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಬೇಡಿಕೆಗಳು: ಮಲಹೊರುವ ಪದ್ಧತಿ ನಿಯಂತ್ರಣ, ನಿರ್ಮೂಲನೆಗೆ ಅಗತ್ಯ ಮಾರ್ಗಸೂಚಿ ರಚಿಸಬೇಕು. ಸ್ವಚ್ಛ ಭಾರತ ಯೋಜನೆ ಅಡಿ ನಿರ್ಮಾಣ ಆಗುತ್ತಿರುವ ಶೌಚಾಲಯಗಳು ಈ ಪದ್ಧತಿ ನಿಲ್ಲಿಸಬೇಕು. ಮಲಹೊರುವ ಪದ್ಧತಿಗೆ ಬೆಂಬಲ ನೀಡಿದ ಹಾಸನ ಜಿಲ್ಲಾಧಿಕಾರಿಯನ್ನು ಕೂಡಲೇ ಬಂಧಿಸಬೇಕು. ಮುಂದಿನ ಬಜೆಟ್‌ನಲ್ಲಿ ಮಲಹೊರುವ ಪದ್ಧತಿಗೆ ಸಿಲಿಕಿರುವ ಎಲ್ಲರನ್ನು ಬಿಡುಗಡೆ ಮಾಡಿ ಪುನರ್ವಸತಿ ಕಲ್ಪಿಸಲು ಸೂಕ್ತ ಅನುದಾನ ಕಾಯ್ದಿರಿಸಬೇಕು. ಈ ಕೆಲಸ ಮಾಡುವಾಗ ಮೃತಪಡುವ ಕಾರ್ಮಿಕರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News