ಕೆಎಟಿ ಅಧ್ಯಕ್ಷರಿಂದ ಪಕ್ಷಪಾತಿ ತೀರ್ಪು: ವಕೀಲರ ಬಳಗ ಆರೋಪ

Update: 2018-02-07 17:21 GMT

ಬೆಂಗಳೂರು, ಫೆ.7: ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಅಧ್ಯಕ್ಷ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಪಕ್ಷಪಾತಿ ತೀರ್ಪುಗಳನ್ನು ನೀಡುವ ಮೂಲಕ ಕೆಲವೇ ಕೆಲವು ವಕೀಲರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕೆಎಟಿ ವಕೀಲರ ಬಳಕ ಆರೋಪಿಸಿದೆ.

ಈ ಕುರಿತಂತೆ ನಮ್ಮ ಅಹವಾಲುಗಳನ್ನು ಆಲಿಸಲು ಇದೇ 9ರಂದು ಕಂದಾಯ ಭವನದ ಆರನೆ ಮಹಡಿಯಲ್ಲಿರುವ ಕೆಎಟಿ ವಕೀಲರ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಹಾಜರಿರಬೇಕು ಎಂದು ಕೆಎಟಿ ವಕೀಲರ ಬಳಗ ಭಕ್ತವತ್ಸಲ ಅವರಿಗೆ ಪತ್ರದಲ್ಲಿ ತಿಳಿಸಿದೆ.

ನಮ್ಮ ಮನವಿಯನ್ನು ಭಕ್ತವತ್ಸಲ ಅವರಿಗೆ ಈಗಾಗಲೇ ತಲುಪಿಸಲಾಗಿದೆ. ಒಂದು ವೇಳೆ ಅವರು, ಈ ಮನವಿಗೆ ಸ್ಪಂದಿಸದೇ ಹೋದಲ್ಲಿ ಫೆ.12ರಿಂದ ಕೋರ್ಟ್ ಕಲಾಪ ಬಹಿಷ್ಕರಿಸಿ ಹೊರಗುಳಿಯುತ್ತೇವೆ ಎಂದು ಕೆಎಟಿ ವಕೀಲರ ಬಳಗದ ಮುಖಂಡ ಗಿರೀಶ್ ಜಂಬಗಿ ತಿಳಿಸಿದ್ದಾರೆ.

ಕೆಎಟಿಯಲ್ಲಿನ ಅವ್ಯವಸ್ಥೆ ಮತ್ತು ತೊಂದರೆಗಳನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೂ ತರಲಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು ಕೂಡಲೇ ಸಮಸ್ಯೆ ಇತ್ಯರ್ಥ್ಯಕ್ಕೆ ಭಕ್ತವತ್ಸಲ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ನಡೆಗಳಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಗಿರೀಶ್ ಎಚ್ಚರಿಸಿದ್ದಾರೆ.

ಸರಕಾರಿ ನೌಕರರ ಸೇವಾ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆಂದೇ ಇರುವ ಕೆಎಟಿ ಅಧ್ಯಕ್ಷರಾಗಿ ಕೆ.ಭಕ್ತವತ್ಸಲ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಾಂಗ ಸದಸ್ಯರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಮತ್ತು ಜಿ.ಶಾಂತಪ್ಪ ಹಾಗೂ ಆಡಳಿತಾಂಗ ಸದಸ್ಯರಾಗಿ ಎ.ಪಿ.ಜೋಷಿ ಮತ್ತು ವಿ.ಪಿ.ಬಳಿಗಾರ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News