ಹತಾಶರಾಗಿರುವ ಪ್ರಧಾನಿ ಮೋದಿ: ಯು.ಟಿ.ಖಾದರ್

Update: 2018-02-07 17:25 GMT

ಬೆಂಗಳೂರು, ಫೆ.7: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವ ಹಂತದಲ್ಲಿದೆ ಎಂಬ ಭಯದಿಂದ, ಹತಾಶರಾಗಿ ಪ್ರಧಾನಿ ನರೇಂದ್ರಮೋದಿ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸತ್ತಿನಲ್ಲಿ ಟೀಕೆಗಳನ್ನು ಮಾಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆರೋಪಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದಿಂದ ಬಂದವರಾದರೂ, ದೇಶದ ಎಲ್ಲ ಜನಾಂಗಗಳನ್ನು ಗೌರವಿಸುತ್ತಾರೆ. ಅವರು ವಿರೋಧ ಪಕ್ಷದ ನಾಯಕನಾಗುವ ಸಂದರ್ಭ ಬಂದಾಗ ಅವರಿಗೆ ಕನಿಷ್ಠ ಸವಲತ್ತು ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿರಲಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು 4 ವರ್ಷ 9 ತಿಂಗಳ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ರಹಿತವಾದ, ಹಲವಾರು ಜನಪರ ಯೋಜನೆಗಳನ್ನು ತಂದು, ಎಲ್ಲ ವರ್ಗದವರಿಗೆ ಸಮಪಾಲು-ಸಮಬಾಳು ರೀತಿಯಲ್ಲಿ ಆಡಳಿತ ನೀಡುತ್ತಿದೆ. ಅದನ್ನು ನೋಡಿ ಕಲಿತು, ದೇಶದಲ್ಲಿ ಅನುಷ್ಠಾನ ಮಾಡುವ ಬದಲು, ಈ ರೀತಿ ಹೇಳಿಕೆಗಳನ್ನು ನೀಡುವುದು ಪ್ರಧಾನಿಗೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

ನರೇಂದ್ರಮೋದಿಯನ್ನು ಒಬ್ಬ ರಾಜಕೀಯ ನಾಯಕನನ್ನಾಗಿ ನೋಡುವುದಾದರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಇರುವ ಅನುಭವದಲ್ಲಿ ಶೇ.10 ರಷ್ಟು ಅನುಭವವೂ ಮೋದಿಗೆ ಇರಲಿಕ್ಕಿಲ್ಲ ಎಂದು ಖಾದರ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News