ರೋಗಗ್ರಸ್ಥ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಕ್ರಮ: ಕೃಷ್ಣಬೈರೇಗೌಡ
ಬೆಂಗಳೂರು, ಫೆ. 7: ರಾಜ್ಯದಲ್ಲಿನ ರೋಗಗ್ರಸ್ಥ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಪ್ರಸ್ತುತ ನಿಯಮಾವಳಿ ಸರಳೀಕರಣಗೊಳಿಸಲು ಕೋರಿ ಆರ್‌ಬಿಐಗೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಉಮೇಶ್ ಕತ್ತಿ ಕೇಳಿದ ಪ್ರಶ್ನೆಗೆ ಸಣ್ಣ ಕೈಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಅವರು, ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಆರ್‌ಬಿಐ ಈಗಾಗಲೇ ವಿಶೇಷ ಪ್ಯಾಕೇಜ್‌ನ್ನು ರೂಪಿಸಿದೆ. ಆರ್‌ಬಿಐನ ನಿಯಮಾವಳಿ ಅನುಸಾರ ಅರ್ಹ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರು ಪ್ಯಾಕೇಜ್ ಸೌಲಭ್ಯವನ್ನು ಪಡೆದಿರುತ್ತಾರೆ. ಉಳಿದವರು ವಂಚಿತರಾಗಿರುತ್ತಾರೆ. ಇಂತಹವರ ಪರ ಮಾರ್ಗಸೂಚಿ ಸರಳೀಕರಣಕ್ಕೆ ಕೋರಿ ಮನವಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಸರಕಾರವೂ ಹೂಡಿಕೆ ಸಬ್ಸಿಡಿ, ಬಡ್ಡಿ ಸಬ್ಸಿಡಿಯನ್ನು ನೀಡುವ ಮೂಲಕ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿದೆ ಎಂದ ಅವರು, ರಾಜ್ಯದಲ್ಲಿ ಡಿಸೆಂಬರ್ 2017ರ ಅಂತ್ಯದ ವರಗೆ 6,07,854 ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ನೋಂದಣಿಯಾಗಿದ್ದು, ಒಟ್ಟು 47,581ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡಿರುತ್ತವೆ ಎಂದು ಮಾಹಿತಿ ನೀಡಿದರು.