ಚುನಾವಣೆಯಲ್ಲಿ ಅಕ್ರಮ ಆರೋಪ: ವಕೀಲರ ಸಂಘದ ಮರು ಚುನಾವಣೆಗೆ ಆಗ್ರಹ
ಬೆಂಗಳೂರು, ಫೆ.7: ಇತ್ತೀಚೆಗೆ ನಡೆದ ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ರದ್ದುಗೊಳಿಸಬೇಕು ಹಾಗೂ ಮರು ಚುನಾವಣೆ ನಡೆಸಬೇಕೆಂದು ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ದಾವೆ ಹೂಡಲಾಗಿದೆ ಎಂದು ವಕೀಲ ಹಾಗೂ ಖಜಾಂಚಿ ಸ್ಥಾನದ ಅಭ್ಯರ್ಥಿ ಎಂ.ಎಚ್. ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಜ.21 ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಚುನಾವಣೆಯಲ್ಲಿ ನಾನು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದರೂ, ನಿನಗೆ ಮತದಾನದ ಹಕ್ಕಿಲ್ಲ ಎಂದು ನನ್ನ ಮತವನ್ನು ಚಲಾಯಿಸಲು ಅವಕಾಶ ವಂಚಿತರನ್ನಾಗಿಸಿದ್ದಾರೆ ಎಂದು ಆರೋಪಿಸಿದರು.
ನಿಯಮಗಳನ್ನು ಮೀರಿ ಚುನಾವಣೆ ನಡೆಸಿದ್ದು, ಹಣ, ಜಾತಿ ಹಾಗೂ ಉಡುಗೊರೆಗಳನ್ನು ನೀಡಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ಈ ಸಂಬಂಧ ಸಿಟಿ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ಪ್ರತಿವಾದಿಗಳಾಗಿ ಚೀಫ್ ರಿಟರ್ನಿಂಗ್, ವಕೀಲರ ಸಂಘ ಹಾಗೂ ನೂತನವಾಗಿ ಆಯ್ಕೆಯಾದ ಖಜಾಂಚಿಗೆ ತುರ್ತು ನೋಟಿಸ್ ನೀಡಲಾಗಿದೆ. ಅಕ್ರಮ ಚುನಾವಣೆ ರದ್ದುಗೊಳಿಸಬೇಕು ಎಂದು ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಅಭ್ಯರ್ಥಿಗಳು ಉಪಸ್ಥಿತರಿದ್ದರು.