×
Ad

ಪ್ರಧಾನಿ ಮೋದಿ ರೈತವಿರೋಧಿ: ಕಿಸಾನ್ ಮಹಾಸಂಘ

Update: 2018-02-07 23:07 IST

ಬೆಂಗಳೂರು, ಫೆ. 7: ರೈತರ ಉತ್ಪಾದನಾ ವೆಚ್ಚಕ್ಕಿಂತ ಶೇ.50 ರಷ್ಟು ಹೆಚ್ಚುವರಿಯಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ಕೂಡಲೇ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಫೆ.23 ರಂದು ದಿಲ್ಲಿ ಘೇರಾವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘದ ಪ್ರಧಾನ ಸಂಚಾಲಕ ಗುರುನಾಮ್ ಸಿಂಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಕಳೆದ 20 ವರ್ಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಆದರೂ, ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರಕಾರಗಳು ರೈತರ ಪರವಾದ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಬದಲಿಗೆ, ಸಂಸದರು ಮತ್ತು ಶಾಸಕರ ಆದಾಯದಲ್ಲಿ ಸಾವಿರಾರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಆಶಾದಾಯಕವಾದ ಯೋಜನೆ ಪ್ರಕಟಿಸಿಲ್ಲ. 7ನೆ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರಕಾರಿ ನೌಕರರಿಗೆ ವೇತನವನ್ನು ಹೆಚ್ಚಳ ಮಾಡಲಾಗಿದೆ. ಹಾಗೂ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಲೋಕಸಭಾ ಸದಸ್ಯರ ಸಂಬಳ ಜಾಸ್ತಿ ಮಾಡಲಾಗಿದೆ. ಆದರೆ, ಅನ್ನದಾತರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸಾಲ ಮನ್ನಾ ಮಾಡಲು ಸರಕಾರದ ಬಳಿ ಹಣವಿಲ್ಲ ಎಂದು ಹೇಳುವುದು ಎಷ್ಟು ಸರಿಯೆಂದು ಅವರು ಪ್ರಶ್ನಿಸಿದರು.

ಕೇಂದ್ರ ಸರಕಾರವು ಶೇ.25 ರಷ್ಟಿದ್ದ ಗೋದಿ ಮೇಲಿನ ಸುಂಕವನ್ನು ತೆಗೆದು ಹಾಕಿದೆ. ಅಲೂಗಡ್ಡೆ ಮೇಲಿದ್ದ ಶೇ.30 ಸುಂಕವನ್ನು ಶೇ.10 ಕ್ಕೆ ಹಾಗೂ ಕ್ರೂಡ್ ಪಾಮ್ ಆಯಿಲ್ ಮೇಲಿದ್ದ ಶೇ.12.5 ರಷ್ಟನ್ನು ಶೇ.7.5 ಗೆ ಹಾಗೂ ರಿಫೈನ್ಡ್ ಪಾಮ್ ಆಯಿಲ್ ಮೇಲಿದ್ದ ಶೇ.20 ರಷ್ಟನ್ನು ಶೇ.15 ಕ್ಕೆ ಇಳಿಕೆ ಮಾಡಲಾಗಿದೆ. ಇದು ರೈತರ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಹಿತ ಕಾಪಾಡುವ ತಂತ್ರವಾಗಿದೆ. ಸರಕಾರವು ಕೃಷಿ ಉತ್ಪಾದನೆಗಳಿಂದ ದಾಖಲೆಯ ಆದಾಯ ಗಳಿಸುತ್ತಿದ್ದರೂ, ಆಮದು ಸುಂಕವನ್ನು ಇಳಿಕೆ ಮಾಡಿದ್ದಾರೆ. ಆದರೆ, ಬಜೆಟ್‌ನಲ್ಲಿ ತರಕಾರಿ ಮತ್ತು ಖಾದ್ಯತೈಲಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಿರುವುದು ಚುನಾವಣೆಯಲ್ಲಿ ರೈತರ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ತಿಳಿಸಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಮೂರುವರೆ ವರ್ಷಗಳ ಆಡಳಿತದಲ್ಲಿ ರೈತರ ಪರವಾದ ಯೋಜನೆಗಳನ್ನು ಜಾರಿ ಮಾಡುವ ಬದಲಿಗೆ, ರೈತ ವಿರೋಧಿ ಯೋಜನೆಗಳು ಜಾರಿ ಮಾಡಿದ್ದೇ ಜಾಸ್ತಿಯಿದೆ. ಕಾರ್ಪೋರೇಟ್ ಕಂಪೆನಿಗಳ ಪರವಾದ ಹೊಸ ನೀತಿಗಳನ್ನು ಜಾರಿ ಮಾಡುವ ಮೂಲಕ ಅವರ ಸೇವೆ ಮಾಡುತ್ತಿದ್ದಾರೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಗಳ ಹೊಂದಾಣಿಕೆಯಿಂದ ಕಾರ್ಪೋರೇಟ್‌ಗಳು 2.5 ಲಕ್ಷ ಕೋಟಿಗೂ ಅಧಿಕ ಲಾಭವನ್ನು ಪಡೆದುಕೊಂಡಿವೆ. ರೈತರು ದಿವಾಳಿಯಾಗಿದ್ದು, ಬೀದಿ ಪಾಲಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಚಳವಳಿಗಾರರಾದ ಕುರುಬೂರು ಶಾಂತಕುಮಾರ್, ಸಂತವೀರ ಜೀ, ಬಿಜು, ಮಾಧವನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News