ಬೆಂಗಳೂರು: ವೇತನ ನಿಗದೀಕರಣ ವರದಿ ಅಂಗೀಕರಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಫೆ.7: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದ ಕಾಲ್ಪನಿಕ ವೇತನ ನಿಗದೀಕರಣ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ವತಿಯಿಂದ ನಗರದಲ್ಲಿಂದು ಧರಣಿ ನಡೆಸಲಾಯಿತು.
ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ನೌಕರರು ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭನಾ ರ್ಯಾಲಿ ನಡೆಸಿದರು. ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಡಿ.ಟಿ.ಗೋಪಿನಾಥ್, ಅನುದಾನಿತ ಶಾಲಾ-ಕಾಲೇಜು ನೌಕರರು ನೇಮಕಗೊಂಡ ದಿನದಿಂದ ಅನುದಾನ ರಹಿತ ಸೇವೆಯನ್ನು ಪರಿಗಣಿಸಿ ಭಡ್ತಿ ಮತ್ತು ನಿವೃತ್ತಿ ವೇತನ ಪಡೆದು ಅವಕಾಶ ಕಲ್ಪಿಸಿಕೊಡಬೇಕು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮತ್ತು ವಿಧಾನಪರಿಷತ್ ಸಭಾಪತಿಗಳು ಹಾಗೂ ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ನಡೆಸಿದ ಸಮ್ಮೇಳನದ ತೀರ್ಮಾನಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸದನ ಸಮಿತಿ ರಚಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದ ಕಾಲ್ಪನಿಕ ವೇತನ ನಿಗದೀಕರಣ ವರದಿಯನ್ನು ತಕ್ಷಣ ಜಾರಿ ಮಾಡಬೇಕು. 30 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಮಿತಿ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ ಬಜೆಟ್‌ನಲ್ಲಿ ಸೇರಿಸಿ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು.