ತ್ರಿವಳಿ ತಲಾಖ್ ನೀಡಿ ಜೈಲಿಗೆ ಹೋಗುವ ಮುಸ್ಲಿಮರದ್ದೇ ನಿಮಗೆ ಚಿಂತೆ: ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ

Update: 2018-02-08 07:15 GMT

ಹೊಸದಿಲ್ಲಿ, ಫೆ.8: "ಇನ್ನೊಂದು ಸಮುದಾಯದ ಯುವಕನೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ಜೈಲಿಗೆ ಹೋದರೆ ಆತನ ವೃದ್ಧ ಹೆತ್ತವರ ಗತಿಯೇನು, ಅವರು ಹೇಗೆ ಬದುಕುತ್ತಾರೆ ಎಂಬುದು ವಿಪಕ್ಷದ ಕಳವಳವಾಗಿದೆ. ಆದರೆ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದಕ್ಕಾಗಿ ಹಿಂದೂ ಯುವಕನೊಬ್ಬ ಜೈಲಿಗೆ ಹೋಗಿದ್ದಕ್ಕಾಗಿ ಅವರು ದನಿಯೆತ್ತುವುದಿಲ್ಲ'' ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಕಾಂಗ್ರೆಸ್ ಪಕ್ಷಕ್ಕೆ ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸುವ ನೈತಿಕ ಸ್ಥೈರ್ಯವಿರಲಿಲ್ಲ. ನಿಮ್ಮ ಸಚಿವರೊಬ್ಬರು ತ್ರಿವಳಿ ತಲಾಖ್  ವಿರುದ್ಧ 30 ವರ್ಷಗಳ ಹಿಂದೆ  ದನಿಯೆತ್ತಿದ್ದರು. ಆದರೆ ಎಲ್ಲಾ ಕಡೆಗಳಿಂದ  ರಾಜಕೀಯ ಒತ್ತಡ ಹೆಚ್ಚಾದಂತೆ ಅವರನ್ನು ಹೊರಹೋಗಲು ಹೇಳಲಾಯಿತು'' ಎಂದು ಮೋದಿ ಹೇಳಿದ್ದಾರೆ.

ಒಬಿಸಿ ಆಯೋಗ ಮಸೂದೆಗೂ ಪೂರ್ಣ ಬೆಂಬಲ ನೀಡದ ಕಾಂಗ್ರೆಸ್ ಪಕ್ಷವನ್ನು ಮೋದಿ ಟೀಕಿಸಿದ್ದಾರೆ. "ಇತರ ಹಿಂದುಳಿದ ವರ್ಗಗಳು ಈಗ ಸೆಟೆದು ನಿಂತಿವೆ. ಅವರ ಆಯೋಗಕ್ಕೆ ಮಾನ್ಯತೆಯನ್ನು ಯಾಕೆ ವಿರೋಧಿಸಬೇಕು ? ಇದನ್ನು ಬಹಿರಂಗವಾಗಿ ವಿರೋಧಿಸಲು ಧೈರ್ಯವಿಲ್ಲದೆ ಮಸೂದೆಯನ್ನು ವಿರೋಧಿಸಲು ನೀವು ಕಾರಣ ಹುಡುಕುತ್ತಿದ್ದೀರಿ'' ಎಂದು ಮೋದಿ ಹೇಳಿದರು.

"ಬಿಜೆಪಿ ಮತ್ತದರ ನೀತಿಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಭಾರತದ ಪರಿಕಲ್ಪನೆಯನ್ನೂ ವಿರೋಧಿಸಲು ಆರಂಭಿಸಿದೆ. ಉದ್ಯಮ ನಡೆಸಲು ಅನುಕೂಲಕರ ವಾತಾವರಣ ಸುಧಾರಿಸಿದೆ. ಆದರೆ ಕಾಂಗ್ರೆಸ್ ಏಕೆ ಸಿಟ್ಟುಗೊಂಡಿದೆ?, ನಾವೆಲ್ಲರೂ ಹೆಮ್ಮೆ ಪಡಬೇಕಲ್ಲವೇ?, ಈಗ ಅವರು ರೇಟಿಂಗ್ ಏಜೆನ್ಸಿಯನ್ನು ಟೀಕಿಸಲು ಆರಂಭಿಸಿದ್ದಾರೆ'' ಎಂದವರು ಹೇಳಿದರು.

"ಕಾಂಗ್ರೆಸ್ ಮುಕ್ತ ಭಾರತಕ್ಕೆ ಮಹಾತ್ಮ ಗಾಂಧಿಯೇ ಕರೆ ನೀಡಿದ್ದರು. ಅದು ಗಾಂಧಿಯ ಕಲ್ಪನೆಯಾಗಿತ್ತು. ಸ್ವಾತಂತ್ರ್ಯ ದೊರೆತ ಕೂಡಲೇ ಕಾಂಗ್ರೆಸ್ ಪಕ್ಷವನ್ನು ಬರ್ಖಾಸ್ತುಗೊಳಿಸಲು ಅವರು ಸಲಹೆ ನೀಡಿದರು. ನಾವು ಅವರ ಹೆಜ್ಜೆಯಲ್ಲಿ ಮುಂದುವರಿಯುತ್ತಿದ್ದೇವೆ ಅಷ್ಟೇ'' ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News