ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕದಿರೇಶ್ ಹತ್ಯೆ ಪ್ರಕರಣ
ಬೆಂಗಳೂರು, ಫೆ. 8: ‘ಮೊನ್ನೆ ಸಂತೋಷ್, ನಿನ್ನೆ ಕದಿರೇಶ್.. ನಾಳೆ ಯಾರೆಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂಬ ಬಿಜೆಪಿ ಸದಸ್ಯರು ಆರೋಪಿಸಿದ್ದು ವಿಧಾನಸಭೆಯಲ್ಲಿ ತೀವ್ರ ಗದ್ದಲ-ಕೋಲಾಹಲ, ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಉಪ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಮೊನ್ನೆ ಸಂತೋಷ್, ನಿನ್ನೆ ಕದಿರೇಶ್ ಹತ್ಯೆಯಾಗಿದ್ದು, ನಾಳೆ ಯಾರೆಂಬ ಆತಂಕ ಸೃಷ್ಟಿಯಾಗಿದೆ ಎಂದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರು ಸಿ.ಟಿ.ರವಿ ಎಂಬ ಹೆಸರೇಳಿದ್ದು ಕೇಳಿಬಂತು.
ಇದರಿಂದ ಕೆರಳಿದ ಬಿಜೆಪಿಯ ಸಿ.ಟಿ.ರವಿ, ‘ಇನ್ನೂ ಯಾರ್ಯಾರ ಮೇಲೆ ಸ್ಕೆಚ್ ಹಾಕಿದ್ದೀರಿ ಹೇಳಿ. ನಾವು ಸಾವಿಗೆ ಎಂದೂ ಹೆದರುವುದಿಲ್ಲ. ಹುಟ್ಟಿದ ಮೇಲೆ ಒಂದು ದಿನ ಸಾಯಲೇಬೇಕು. ಯಾರೂ ಮೊಳೆ ಹೊಡೆದುಕೊಂಡು ಬದುಕಿರಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಬಿಜೆಪಿಯ ಜೀವರಾಜ್, ಅರವಿಂದ ಲಿಂಬಾವಳಿ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಶೆಟ್ಟರ್, ಗಂಭೀರ ವಿಚಾರ ಚರ್ಚೆ ನಡೆಯುತ್ತಿರುವ ವೇಳೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇವರಿಗೆ ನಾಚಿಕೆಯಾಗಬೇಕು. ಇವರ ಮನಸ್ಥಿತಿ ಏನೆಂಬುದು ಸ್ಪಷ್ಟ. ಬಹಿರಂಗ ಗೂಂಡಾಗಿರಿ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಓಹೋ...ಎಂದರು. ಇದಕ್ಕೆ ಅರವಿಂದ ಲಿಂಬಾವಳಿ ಆಕ್ಷೇಪಿಸಿದ್ದು, ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಕ್ಸಮರ ನಡೆಯಿತು. ‘ಈಗಾಗಲೇ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಎಸ್ಪಿಗೆ ದೂರು ನೀಡಿದ್ದು, ಅವರಿಗೆ ರಕ್ಷಣೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ವಿಷಾದ: ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ, ‘ ಪರಸ್ಪರ ಆತ್ಮೀಯರಾಗಿರುವ ಕಾರಣಕ್ಕೆ ಸಿ.ಟಿ. ರವಿ ಹೆಸರು ಪ್ರಸ್ತಾಪಿಸಿದ್ದು, ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕಾಗಿ ನಾನು ಸರಕಾರದ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು.
ಆದರೂ, ಸುಮ್ಮನಾಗದ ಬಿಜೆಪಿ ಸದಸ್ಯರು, ರವಿ ಹೆಸರನ್ನು ಉಲ್ಲೇಖಿಸಿದ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದರು. ಕೂಡಲೇ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಶಿವಶಂಕರ್ ರೆಡ್ಡಿ, ಈಗಾಗಲೇ ಸರಕಾರ ವಿಷಾದ ವ್ಯಕ್ತಪಡಿಸಿದೆ. ಹೀಗಾಗಿ ಆ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದರಿಂದ ಚರ್ಚೆಗೆ ತೆರೆಬಿತ್ತು.
ಆರೋಪಿಗಳನ್ನು ಬಂಧಿಸಿ: ಉದ್ಯಾನನಗರಿ ಬೆಂಗಳೂರು ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ರಾಜಕೀಯ ಕಾರಣಕ್ಕಾಗಿ ಹತ್ಯೆಗಳು ನಡೆಯುತ್ತಿದ್ದು, ಇದು ರಾಜ್ಯಕ್ಕೆ ಒಳ್ಳೆಯದಲ್ಲ. ಯಾರೂ ಇಲ್ಲಿ ಶಾಶ್ವತವಲ್ಲ. ಸಾವು ನಮ್ಮ ಬೆನ್ನ ಹಿಂದೆಯೇ ಇರುತ್ತದೆ ಎಂದು ಅಶೋಕ್ ಹೇಳಿದರು. ನಿನ್ನೆ ಹಾಡಹಗಲೇ ಕದಿರೇಶ್ ಹತ್ಯೆಯಾಗಿದೆ. ಗುಪ್ತಚರ ಇಲಾಖೆ ಏನಾಗಿದೆ? ಅಪರಾಧಿಗಳಿಗೆ ಪೊಲೀಸರೆಂದರೆ ಭಯವೇ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ ಅವರು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ದಕ್ಷ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.