ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು: ಸತ್ಯಾಗ್ರಹ ಹಿಂಪಡೆದ ವಕೀಲರ ಸಂಘ

Update: 2018-02-08 14:13 GMT

ಬೆಂಗಳೂರು, ಫೆ.8: ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಪ್ರಕ್ರಿಯೆಗೆ ಕೇಂದ್ರ ಸರಕಾರ ಚಾಲನೆ ನೀಡಿದ ಹಿನ್ನೆಲೆಯಲ್ಲಿ ವಕೀಲರ ಸಂಘ ನಡೆಸುತ್ತಿದ್ದ ಸರದಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದೆ.

ಹೈಕೋರ್ಟ್‌ನಲ್ಲಿ ಶೇ.62ರಷ್ಟು ನ್ಯಾಯಮೂರ್ತಿ ಹುದ್ದೆ ಖಾಲಿ ಇದ್ದು, ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ನ್ಯಾಯಮೂರ್ತಿ ಹುದ್ದೆ ಭರ್ತಿಯ ಬೇಡಿಕೆ ಮುಂದಿಟ್ಟು ವಕೀಲರ ಸಂಘ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕಳೆದ ನಾಲ್ಕು ದಿನದಿಂದ ಹೈಕೋರ್ಟ್ ಮುಂಭಾಗದ ದ್ವಾರದಲ್ಲಿ ಬೆಂಗಳೂರು ವಕೀಲರ ಸಂಘ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು. ಇದಕ್ಕೆ ವಕೀಲರು, ನಿವೃತ್ತ ನ್ಯಾಯಮೂರ್ತಿ ವಲಯದಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿತ್ತು. ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು. ಸದಾನಂದಗೌಡ ಕೇಂದ್ರ ಕಾನೂನು ಸಚಿವರೊಂದಿಗೆ ಮಾತುಕತೆ ನಡೆಸಿದರೆ, ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದು ನ್ಯಾಯಮೂರ್ತಿ ಹುದ್ದೆ ಭರ್ತಿಗೆ ಮನವಿ ಮಾಡಿದ್ದರು. ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಜಟಿಲತೆಯನ್ನು ವಿವರಿಸಿದ್ದರು. ಪ್ರಧಾನಿ ಭೇಟಿಗೆ ಕಾಲಾವಕಾಶವನ್ನೂ ಕೋರಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ಭರ್ತಿಗೆ ಚಾಲನೆ ಸಿಕ್ಕಿದೆ.

ಕರ್ನಾಟಕ ಹೈಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ ಶೀಘ್ರದಲ್ಲೇ ನಡೆಯುವ ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ. ಐವರು ನ್ಯಾಯಮೂರ್ತಿಗಳ ನೇಮಕದ ಕಡತ ರಾಷ್ಟ್ರಪತಿ ಭವನಕ್ಕೆ ತಲುಪಿದೆ. ಸುಪ್ರೀಂಕೋರ್ಟ್ ಶಿಫಾರಸು ಅಂಗೀಕರಿಸಿದ ಕೇಂದ್ರ ಸರಕಾರ, ಕೃಷ್ಣ ದೀಕ್ಷಿತ್, ಎಸ್.ಜಿ.ಪಂಡಿತ್, ಆರ್.ದೇವದಾಸ್, ಬಿ.ಎಂ.ಶ್ಯಾಮ್ ಪ್ರಸಾದ್, ಸುನೀಲ್ ದತ್ ಯಾದವ್ ಹೆಸರು ಶಿಫಾರಸು ಮಾಡಿ ಅಂಕಿತಕ್ಕೆ ರಾಷ್ಟ್ರಪತಿ ಕಚೇರಿಗೆ ಕಳುಹಿಸಿಕೊಟ್ಟಿದೆ. ಈ ಐವರೂ ರಾಜ್ಯ ಹೈಕೋರ್ಟ್‌ನ ವಕೀಲರಾಗಿದ್ದಾರೆ. ಇನ್ನು ನ್ಯಾಯಮೂರ್ತಿ ಹುದ್ದೆ ನೇಮಕ ಕಡತ ಕೇಂದ್ರ ಸರಕಾರದಿಂದ ರಾಷ್ಟ್ರಪತಿ ಭವನ ತಲುಪುತ್ತಿದ್ದಂತೆ ನ್ಯಾಯಮೂರ್ತಿಗಳ ನೇಮಕಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಸರದಿ ಸತ್ಯಾಗ್ರಹವನ್ನು ವಕೀಲರ ಸಂಘ ಹಿಂಪಡೆದಿದೆ.

ಈಗ ಐವರು ನ್ಯಾಯಮೂರ್ತಿಗಳ ನೇಮಕವಾಗುತ್ತಿದೆ. ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಮೂವರು ನ್ಯಾಯಮೂರ್ತಿಗಳ ನೇಮಕ ಸಂಬಂಧವೂ ಭರವಸೆ ಸಿಕ್ಕಿದೆ. ಒಟ್ಟು ಎಂಟು ನ್ಯಾಯಮೂರ್ತಿಗಳ ನೇಮಕ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ.
-ಬಿ.ವಿ.ಆಚಾರ್ಯ, ಮಾಜಿ ಅಡ್ಟೋಕೇಟ್ ಜನರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News