ಫೆ.10 ರಿಂದ ಪ್ರವಾಸಿ ಜಾನಪದ ಲೋಕೋತ್ಸವ
ಬೆಂಗಳೂರು, ಫೆ.8: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಪ್ರವಾಸಿ ಜಾನಪದ ಲೋಕೋತ್ಸವ-2018 ಅನ್ನು ಫೆ.10 ಮತ್ತು 11 ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ, ಜಾನಪದ ಲೋಕೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಈ ಎರಡು ದಿನಗಳಲ್ಲಿ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಕಲಾವಿದರಿಂದ ಈ ಉತ್ಸವದಲ್ಲಿ ಕಲೆಗಳನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.
ದೇಶದ ಹಲವು ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಪಟಾಕುಣಿತ, ಡೊಳ್ಳು ಕುಣಿತ, ಹಾಡು ಮೇಳ, ಜಾನಪದ ನೃತ್ಯ, ವೀರಭದ್ರಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಮಹಿಳಾ ತಮಟೆ ಕುಣಿತ, ಕಂಸಾಳೆ ಕುಣಿತ, ಚಿಟ್ ಮೇಳ ಹಾಗೂ ರಸೋಲ್ಲಾಸ ಯಕ್ಷಗಾನ ನೃತ್ಯರೂಪಕ ಸೇರಿದಂತೆ ವಿವಿಧ ಕಲೆಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದರು.
ಲೋಕೋತ್ಸವದ ಅಂಗವಾಗಿ ಆಧುನಿಕತೆಯತ್ತ ಜಾನಪದ ಕಲೆಗಳು ವಿಷಯದ ಕುರಿತು ಚರ್ಚೆ, ‘ಲೋಕಸಿರಿ’ ವಸ್ತು ಸಂಗ್ರಹಾಲಯ ಉದ್ಘಾಟನೆ ಹಾಗೂ ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.
‘ನಾಡೋಜ ಎಚ್.ಎಲ್.ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ’ಯನ್ನು ಸಣ್ಣಾಟ ಕಲಾವಿದ ಭೀಮಶೆಪ್ಪ ಗೋವಿಂದಪ್ಪ ಪರಡಿ, ‘ನಾಡೋಜ ಡಾ.ಜಿ.ನಾರಾಯಣ ಜಾನಪದ ಲೋಕಶ್ರೀ ಪ್ರಶಸ್ತಿ’ಯನ್ನು ಜಾನಪದ ಸಾಹಿತ್ಯ ಅನುವಾದಕ ಗುರುಮೂರ್ತಿ ಪೆಂಡಕೂರು, ‘ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ’ಯನ್ನು ಹಾಲಕ್ಕಿ ಸುಗ್ಗಿ ಕಲಾವಿದೆ ಖೇಮು ತುಳಸುಗೌಡ, ‘ಸೋಬಾನೆ ಚಿಕ್ಕಮ್ಮ ಪ್ರಶಸ್ತಿ’ಯನ್ನು ಢಮಾಮಿ ವಾದ್ಯಕುಣಿತ ಕಲಾವಿದ ಸಂತಾನ್ ಕಿಸ್ತೋಜ್ ಸಿದ್ದಿಗೆ ನೀಡಲಾಗುತ್ತಿದೆ.
‘ದೊಡ್ಡಮನೆ ಪ್ರಶಸ್ತಿ’ಯನ್ನು ಚೌಡಕಿ ಕಲಾವಿದ ಫಕೀರಸಿದ್ದಪ್ಪ, ‘ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ’ಯನ್ನು ಸೋಲಿಗ ಹಾಡು ಕಲಾವಿದ ಅಚ್ಚುಗೇಗೌಡ ಹಾಗೂ ‘ಜಾನಪದ ಲೋಕ ಪ್ರಶಸ್ತಿ’ಯನ್ನು ಯಕ್ಷಗಾನ ಕಲಾವಿದ ಎ.ಬಿ.ಶಂಕರಪ್ಪ ಹಾಗೂ ‘ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ’ಯನ್ನು ಪೂಜಾಕುಣಿತ ಕಲಾವಿದ ಶಿವಣ್ಣ, ಸೋಬಾನೆ ಹಾಡುಗಾರ್ತಿ ಗೌರಮ್ಮ ಹಾಗೂ ಬರಗೂರು ಲಕ್ಷ್ಮಮ್ಮ ಮತ್ತು ಪಟಾ ಕುಣಿತ ಕಲಾವಿದ ಜಿ.ಕೆ.ನರಸಿಂಹಯ್ಯಗೆ ನೀಡಲಾಗುತ್ತಿದೆ. ಎಲ್ಲ ಪ್ರಶಸ್ತಿಗಳು 10 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಅವರು ವಿವರಿಸಿದರು.
ಜಾನಪದ ಲೋಕೋತ್ಸವವನ್ನು ರಾಜ್ಯ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಉದ್ಘಾಟಿಸಲಿದ್ದು, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಸೈಯದ್ ಮುದೀರ್ ಆಗಾ, ರಾಮಚಂದ್ರೇಗೌಡ, ಮಾಜಿ ಶಾಸಕ ಕೆ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಿಲ್ಲಾಧಿಕಾರಿ ಲತಾ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.