×
Ad

ಮಾಜಿ ಸ್ಪೀಕರ್ ಬಣಕಾರ ನಿಧನ: ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Update: 2018-02-08 20:00 IST

ಬೆಂಗಳೂರು, ಫೆ. 8: ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸ್ಪೀಕರ್ ಬಿ.ಜಿ.ಬಣಕಾರ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗುರುವಾರ ಬೆಳಗ್ಗೆ ವಿಧಾನಸಭೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಕೋಳಿವಾಡ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕು ಚಿಕ್ಕಣತಿಯಲ್ಲಿ ಜನಿಸಿದ ಬಣಕಾರ ಅವರು ಕಾನೂನು ಪದವೀಧರರಾಗಿದ್ದು, ನ್ಯಾಯವಾದಿಯಾಗಿದ್ದರು. ಪ್ರವೃತ್ತಿಯಲ್ಲಿ ಕೃಷಿಕರಾಗಿದ್ದರು. ಮಾತ್ರವಲ್ಲ ಕನ್ನಡ ಪ್ರೇಮಿಯಾಗಿದ್ದ ಅವರು ಬಡವರು, ದೀನ-ದಲಿತರು, ಹಿಂದುಳಿದವರ ಪರ ವಾದ ಮಂಡಿಸಿ ಖ್ಯಾತ ನ್ಯಾಯವಾದಿ ಎನಿಸಿಕೊಂಡಿದ್ದರು ಎಂದರು.

1957ರಲ್ಲಿ ಪಂಚಾಯತ್ ಚುನಾವಣೆ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ ಅವರು 1959ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. 1972ರಲ್ಲಿ ಶಾಸಕರಾಗಿ ಹಿರೇಕೆರೂರು ಕ್ಷೇತ್ರದಿಂದ ಆಯ್ಕೆಯಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದರು. ಅವರೊಬ್ಬ ಕ್ರಿಯಾಶೀಲ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಶು ವೈದ್ಯಕೀಯ, ಹೈನುಗಾರಿಕೆ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು. 1983ರಲ್ಲಿ ಪಕ್ಷೇತರರಾಗಿ, 1985ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಿಂದ 1989ರ ವರೆಗೆ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

ಗಾಂಧಿಯಾಗಿದ್ದ ಬಣಕಾರ ಅವರು, ಸಹಕಾರ, ಸಾಹಿತ್ಯ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಅಲ್ಲದೆ ಹಲವು ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದ ಅಪರೂಪದ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯೇ ಆಗಿದ್ದರು ಎಂದು ಸ್ಮರಿಸಿದರು.

ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಸರಳ ವ್ಯಕ್ತಿ. ಇಂದಿನ ರಾಜಕಾರಣಿಗಳು ಹಾಗೂ ಯುವಕರಿಗೆ ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಅವರನ್ನು ಎಲ್ಲರೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.

ಬಳಿಕ ಸ್ಪೀಕರ್ ಕೋಳಿವಾಡ, ಸಚಿವ ಆಂಜನೇಯ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಪಿ.ರಾಜೀವ್, ಸಿ.ಟಿ.ರವಿ. ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಗಣ್ಯರು ಅವರ ಒಡನಾಟವನ್ನು ಸ್ಮರಿಸಿ, ಗುಣಗಾನ ಮಾಡಿದರು. ಆ ನಂತರ ಮೃತರ ಗೌರವಾರ್ಥ ಸದನದಲ್ಲಿ ಮೌನಾಚರಣೆ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ..ಇವ ನಮ್ಮವ ಇವ ನಮ್ಮನ ಇವ ನಮ್ಮವ ನೆಂದೆನಿಸಯ್ಯ ಎಂಬ ಬಸವಣ್ಣನವರ ತತ್ವದನ್ವಯ ಬದುಕಿದ ನಿಜವಾದ ಜಾತ್ಯತೀತ ವ್ಯಕ್ತಿ ಬಿ.ಜಿ.ಬಣಕಾರರು. ಅವರು ಸರಳ-ಸಜ್ಜನಿಕೆಗೆ ಮತ್ತೊಂದು ಹೆಸರಾಗಿದ್ದರು. ಅವರು ನಮ್ಮೆಲ್ಲರಿಗೂ ಮಾದರಿ’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News