ಕನಿಷ್ಠ ವೇತನ, ಉದ್ಯೋಗ ಭದ್ರತೆಗೆ ಒತ್ತಾಯಿಸಿ ಬೀದಿಗಿಳಿದ ಬಿಸಿಯೂಟ ನೌಕರರು
ಬೆಂಗಳೂರು, ಫೆ. 8: ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಮೂರು ದಿನಗಳಿಂದ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿಐಟಿಯು ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ನಗರದಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ವತಿಯಿಂದ ಮಂಗಳವಾರದಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದೆ. ಅಲ್ಲದೆ, ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವದವರೆಗೂ ಬೃಹತ್ ರ್ಯಾಲಿ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ತಾವು ಹೊತ್ತು ತಂದಿದ್ದ ಊಟದ ಬುತ್ತಿಗಳನ್ನು ಹಾಗೂ ಚೀಲಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೆರವಣಿಗೆ ನಡೆಸಿದರೆ, ಮೂರು ದಿನಗಳಿಂದ ಧರಣಿ ನಡೆಸಿದರೂ ಯಾವ ಸರಕಾರದ ಯಾರೊಬ್ಬ ಪ್ರತಿನಿಧಿಯೂ ಭೇಟಿ ನೀಡದಿದ್ದರಿಂದ ಬೇಸತ್ತ ನೂರಾರು ನೌಕರರು ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಮಹಾರಾಣಿ ಕಾಲೇಜು ಎದುರು ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ರೈಲು ನಿಲ್ದಾಣದಿಂದ ವೆುರವಣಿಗೆಯಲ್ಲಿ ಬಂದವರನ್ನು ಹಾಗೂ ಮುತ್ತಿಗೆ ಹಾಕಲು ಯತ್ನಿಸಿದ ನೌಕರರನ್ನು ಒಟ್ಟಿಗೆ ಉದ್ಯಾನವನದಲ್ಲಿ ಕೂಡಿ ಹಾಕಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
ಮಹಾರಾಣಿ ಕಾಲೇಜಿನಿಂದ ಸಾಗರ್ ಚಿತ್ರಮಂದಿರದ ವೃತ್ತದವರೆಗೆ ಸಾವಿರಾರು ಬಿಸಿಯೂಟ ನೌಕರರು ತಲೆ ಮೇಲೆ ಬುತ್ತಿ, ಕೈಯಲ್ಲಿ ಸಣ್ಣ ಸಣ್ಣ ಮಕ್ಕಳು ಹೊತ್ತು ನಿಂತಿದ್ದ ದೃಶ್ಯಗಳು ಪ್ರತಿಯೊಬ್ಬರ ಹೃದಯ ಕಲಕುವಂತಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೌಕರರು ಉದ್ಯೋಗ ಖಾಯಂಗೊಳಿಸಿ ಹಾಗೂ ಕನಿಷ್ಠ ವೇತನ ನಿಗದಿ ಮಾಡಿ, ಕೆಲಸ ಖಾಯಂ ಮಾಡಿ, ಇಎಸ್‌ಐ-ಪಿಎಫ್ ನೀಡಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ನೌಕರರ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಗಳಿಂದ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಆತಂಕದ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ ಕನಿಷ್ಠ ಜೀವನ ನಡೆಸಲು ಸಾಧ್ಯವಾಗದಂತಹ ಕೂಲಿ ಪಡೆಯುತ್ತಿದ್ದಾರೆ. ಆದುದರಿಂದ ಕೂಡಲೇ ಕೇಂದ್ರ ಸರಕಾರ ಭಾರತೀಯ ಕಾರ್ಮಿಕರ ಸಮ್ಮೇಳನದ ಶಿಫಾರಸ್ಸಿನಂತಯೇ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ಯೋಜನೆ ಅಡಿಯಲ್ಲಿ 25 ಲಕ್ಷ ನೌಕರರು ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ವೇತನ ಹೆಚ್ಚಳ ಮಾಡಿಲ್ಲ. ಬದಲಿಗೆ ಹಂತ ಹಂತವಾಗಿ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಆರಂಭ ಮಾಡುವ ಮೂಲಕ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೇಂದ್ರದ ಬಜೆಟ್‌ನಲ್ಲಿ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ ಯೋಜನೆಯನ್ನು ನಿರ್ನಾಮ ಮಾಡಲು ತಯಾರಿ ನಡೆಸಿದ್ದಾರೆ. ಐಸಿಡಿಎಸ್, ಅಕ್ಷರ ದಾಸೋಹ ಯೋಜನೆ ಹಾಗೂ ಎನ್‌ಆರ್‌ಎಚ್‌ಎಮ್ ಯೋಜನೆಗಳಿಗೆ ಶೇ.60 ರಷ್ಟು ಅನುದಾನವನ್ನು ಕಡಿಮೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ನೌಕರರಿಗೆ ಐದು ಸಾವಿರ ವೇತನ ನೀಡಬೇಕು. ಕನಿಷ್ಠ ಕೂಲಿ ಹಾಗು ಸಾಮಾಜಿಕ ಭದ್ರತೆ ನೀಡಬೇಕು. ಶಿಕ್ಷಣ ಇಲಾಖೆಯಿಂದ ನೇರವಾಗಿ ಬಿಸಿಯೂಟ ನೌಕರರನ್ನು ಮೇಲ್ವಿಚಾರಣೆ ಮಾಡಬೇಕು. ಪಿಯುಸಿವರೆಗೂ ಬಿಸಿಯೂಟ ಯೋಜನೆ ವಿಸ್ತರಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಟ 2 ಅಡುಗೆಯವರನ್ನು ನೇಮಿಸಬೇಕು. ಎಲ್ಲ ನೌಕರರಿಗೂ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ ಜಾರಿ ಮಾಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈ ಬಿಡುವುದನ್ನು ನಿಲ್ಲಿಸಬೇಕು. ಬರಗಾಲ ಹಾಗೂ ವಿಶೇಷ ದಿನಗಳಲ್ಲಿ ವೇತನ ನೀಡಬೇಕು. ನೌಕರರಿಗೆ ಪೆನ್ಷನ್ ಸೌಲಭ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವರಲಕ್ಷ್ಮಿ ಸರಕಾರವನ್ನು ಒತ್ತಾಯಿಸಿದರು.
ಬಿಸಿಯೂಟ ಸಂಘದ ಅಧ್ಯಕ್ಷ ಹೊನ್ನಪ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಿಕೆ ಮಹಿಳೆಯರ ಬಗ್ಗೆ ಶಿಕ್ಷಣ ಸಚಿವರು ನಿರ್ಲಕ್ಷ ತೋರುತ್ತಿದ್ದಾರೆ. ಬಡವರ ಕಣ್ಣೀರು ಅವರಿಗೆ ಕಾಣುತ್ತಿಲ್ಲ. ಸರಕಾರ ಮಾತುಕತೆಗೆ ಬಂದು ಏನು ಹೇಳುತ್ತಾರೋ ಅದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಾಹನ ಸಂಚಾರ ಅಸ್ತವ್ಯಸ್ತ: ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಬಿಸಿಯೂಟ ನೌಕರರು ಬೆಳಿಗ್ಗೆ 10 ರಿಂದಲೇ ನಗರದ ಸಿಟಿ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರಂ, ಶೇಷಾದ್ರಿಪುರಂ, ಗಾಂಧಿನಗರ, ಕೆ.ಆರ್.ವೃತ್ತ, ಕಾರ್ಪೋರೇಷನ್, ಆನಂದ್‌ರಾವ್ ವೃತ್ತ ಸೇರಿದಂತೆ ನಗರದ ಹೃದಯ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಬಿಗಿ ಭದ್ರತೆ: ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಸೂಕ್ತ ಭದ್ರತೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿತ್ತು. ಜೊತೆಗೆ, ನಗರದ ಹೊರ ಭಾಗದ ಯಶವಂತಪುರ, ಮಲ್ಲೇಶ್ವರಂ, ಬೆಂಗಳೂರು ದಂಡು, ಕೃಷ್ಣರಾಜಪುರ, ನಾಯಂಡಹಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಾಗೂ ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರಿಂದ ವಿಧಾನಸೌಧಕ್ಕೆ ತೆರಳುವ ಎಲ್ಲ ಮಾರ್ಗಗಳಲ್ಲಿ ಹೆಚ್ಚಿನ ಪೊಲೀಸರು ನಿಯೋಜನೆ ಮಾಡಲಾಗಿತ್ತು.
‘ಕೇಂದ್ರ ಮತ್ತು ರಾಜ್ಯ ಸರಕಾರಗಳು ಎರಡು ಸಾವಿರ ರೂ.ಗಳು ಸಂಬಳ ಕೊಡುತ್ತಾರೆ. ಇದರಿಂದ ನಾವು ಜೀವನ ನಡೆಸುವುದು ಹೇಗೆ. ನಮ್ಮ ಮನೆಗಳಲ್ಲಿ ಟೀ-ಕಾಫಿಗೆ ಇಷ್ಟು ಹಣ ಬೇಕಾಗುತ್ತದೆ. ತಿಂಗಳ ಪೂರ್ತಿ ಮತ್ತೇನು ತಿನ್ನಬೇಕು’
-ಹುಚ್ಚಮ್ಮ, ಬಿಸಿಯೂಟ ನೌಕರರು, ಚನ್ನಪಟ್ಟಣರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಬೇಕು ಮತ್ತು ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ, ನಾವು ಇಲ್ಲಿಂದ ಮೇಲೆದ್ದು ಹೋಗುವುದಿಲ್ಲ
-ಮಾಲಿನಿ ಮೇಸ್ತ, ಸಿಐಟಿಯು ಪ್ರಧಾನ ಕಾರ್ಯದರ್ಶಿ