×
Ad

ಸೂಕ್ತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರು ಕಪ್ಪುಪಟ್ಟಿಗೆ: ಎಂ.ಶಿವರಾಜು

Update: 2018-02-08 22:22 IST

ಬೆಂಗಳೂರು, ಫೆ.8: ಸೂಕ್ತ ಸಮಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಬಿಬಿಎಂಪಿಯ ನೂತನ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ಪಾಲಿಕೆಯ ಇತಿಹಾಸದಲ್ಲಿಯೇ ದಾಖಲೆಯ ಪ್ರಮಾಣದ ಅನುದಾನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಿಂದ ಬಂದಿದೆ ಎಂದರು.

ಸರಕಾರ ಹಾಗೂ ಪಾಲಿಕೆಯ ಅನುದಾನದಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿದ್ದು, ಮಾರ್ಚ್ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಒಂದೊಮ್ಮೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.

ದೇಶದಲ್ಲಿಯೇ ಮೊದಲ ಬಾರಿಗೆ ವಾಹನ ನಿಲುಗಡೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಜತೆಗೆ, ಕೌನ್ಸಿಲ್ ಸಭೆಯಲ್ಲಿಯೂ ಮಹಿಳಾ ಸದಸ್ಯೆ ಅವಕಾಶ ಹಾಗೂ ಪಿಂಕ್ ಆಟೊಗಳನ್ನು ಪರಿಚಯಿಸಿದ್ದಾರೆ. ಇನ್ನು ತುರ್ತು ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ರವಾನಿಸಲು ಏರ್ ಆ್ಯಂಬುಲೆನ್ಸ್ ಸೇವೆ ಆರಂಭಿಸಲು ನಿರ್ಧರಿಸಿದ್ದು, ಬಜೆಟ್‌ನಲ್ಲಿ ಯೋಜನೆಗೆ ಹಣ ನಿಗದಿಪಡಿಸಲಾಗುವುದು ಎಂದು ಎಂ.ಶಿವರಾಜು ನುಡಿದರು.

ಇಂದಿರಾ ಕ್ಯಾಂಟೀನ್ ಯಶಸ್ವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ಜನರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಎಲ್ಲ 198 ವಾರ್‌ಗಳಲ್ಲೂ ಅನುಷ್ಠಾನಗೊಳಿಸಲಾಗಿದೆ.

ಅದರಲ್ಲಿ 174 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಮತ್ತು 24 ವಾರ್ಡ್‌ಗಳಲ್ಲಿ ಮೊಬೈಲ್ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿವೆ. ಯೋಜನೆ ಯಶಸ್ವಿಯಾಗಿದ್ದು, ಇನ್ನಷ್ಟು ಕಡೆ ಕ್ಯಾಂಟೀನ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಎಂ.ಶಿವರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News