×
Ad

ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಫೆ.15 ರಿಂದ ಧರಣಿ

Update: 2018-02-08 22:32 IST

ಬೆಂಗಳೂರು, ಫೆ.8: ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ 10500 ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ(ಬಿಸಿಯೂಟ) ನೌಕರರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಫೆ.15 ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಶಿವಣ್ಣ, ರಾಜ್ಯ ಸರಕಾರ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನವನ್ನು ಹೆಚ್ಚಳ ಮಾಡಿದ್ದು, ಬಿಸಿಯೂಟ ನೌಕರರನ್ನು ಕಡೆಗಣಿಸಲಾಗಿದೆ. ಅಲ್ಲದೆ, ಹತ್ತಾರು ವರ್ಷಗಳಿಂದ ಯಾವುದೇ ಉದ್ಯೋಗ ಭದ್ರತೆಯಿಲ್ಲದೆ ಹಾಗೂ ಕನಿಷ್ಠ ವೇತನವಿಲ್ಲದೆ ಲಕ್ಷಾಂತರ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಹೀಗಾಗಿ, ಸರಕಾರ ಇವರನ್ನು ನಿರ್ಲಕ್ಷ ಮಾಡುವುದು ಸಲ್ಲದು ಎಂದು ಹೇಳಿದರು.

ರಾಜ್ಯದ ಎಲ್ಲ ಅಕ್ಷರ ದಾಸೋಹ ನೌಕರರಿಗೆ ತಾರತಮ್ಯವಿಲ್ಲದೆ ತಿಂಗಳಿಗೆ 10500 ಕನಿಷ್ಠ ವೇತನ ನೀಡಬೇಕು. ಮಾಲೂರು ತಾಲೂಕಿನಲ್ಲಿ ಎಲ್ಲ ಅಕ್ಷರ ದಾಸೋಹ ನೌಕರರಿಗೆ ಬ್ಯಾಂಕ್ ಮೂಲಕ ವೇತನ ನೀಡಬೇಕು. ಎಸ್‌ಡಿಎಂ ಮತ್ತು ಶಾಲಾ ಶಿಕ್ಷಕ ವರ್ಗದಿಂದ ಕಿರುಕುಳ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಅಡುಗೆ ನೌಕರರಿಗೆ ಕೆಲಸದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೊಂದರೆಯಾದರೆ ಅದರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು. ಎಲ್ಲ ಅಡುಗೆ ತಯಾರಕರಿಗೆ ಒಂದೇ ಸಮವಸ್ತ್ರ ನೀಡಬೇಕು. ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಅಡುಗೆ ಸಹಾಯಕರನ್ನು ಕೆಲಸದಿಂದ ತೆಗೆದು ಹಾಕಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News