ಬಿಸಿಯೂಟ ನೌಕರರ ಧರಣಿಗೆ ಮಣಿದ ಸರಕಾರ: ಅನಿರ್ದಿಷ್ಟಾವಧಿ ಧರಣಿ ವಾಪಸ್

Update: 2018-02-09 16:35 GMT

ಬೆಂಗಳೂರು, ಫೆ.9: ವೇತನ ಹೆಚ್ಚಳ, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಎಐಟಿಯುಸಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಪ್ರತಿಭಟನಾಕಾರರೊಂದಿಗೆ ನಡೆದ ಸಂಧಾನ ಸಭೆಯಲ್ಲಿ, ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆಯಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ಚಳಿ-ಬಿಸಿಲನ್ನು ಲೆಕ್ಕಿಸದೇ ಮಕ್ಕಳ ಸಮೇತ ಬೀದಿಯಲ್ಲಿ ಧರಣಿ ನಡೆಸಿದರೂ, ಮೂರು ದಿನಗಳಿಂದ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲದೆ, ಒಂದು ಬಾರಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸರಕಾರದೊಂದಿಗೆ ಸಭೆ ನಡೆಸುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು.

ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಚಿತ್ರ ನಟರ ಬೆಂಬಲ: ಬಿಸಿಯೂಟ ನೌಕರರು ಭಿಕ್ಷೆ ಬೇಡುತ್ತಿಲ್ಲ, ಅವರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರು ನ್ಯಾಯಯುತವಾದ ಬೇಡಿಕೆಗಳನ್ನಿಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ. ಅವರು ತಾವು ಮಾಡಿದ ಕೆಲಸಕ್ಕೆ ಆತ್ಮಗೌರವದಿಂದ ಜೀವನ ನಡೆಸಲು ಹಾಗೂ ಗೌರವಯುತವಾದ ಜೀವನಕ್ಕಾಗಿ ಬೇಕಾದ ಕನಿಷ್ಠ ವೇತನ ನೀಡಿ ಎಂದು ಬೇಡಿಕೆಯನ್ನಟ್ಟಿದ್ದಾರೆ. ಆದರೆ, ಆಳುವವರು ಅದನ್ನು ಈಡೇರಿಸದೇ, ಮೂರು-ನಾಲ್ಕು ದಿನಗಳಿಂದ ಬೀದಿಯಲ್ಲಿ ಮಲಗುವಂತೆ ಮಾಡಿರುವುದು ಖಂಡನೀಯ. ಸಾವಿರಾರು ನೌಕರರು ಬೆಂಗಳೂರಿನ ಬೀದಿಯಲ್ಲಿ ಮಲಗಿದ್ದಾರೆ. ಆದರೆ, ಅಧಿಕಾರದಲ್ಲಿರುವವರು ಎರಡು ನಿಮಿಷ ಬಂದು ಸಮಸ್ಯೆ ಕುರಿತು ಮಾತಾಡೋಕೆ ಸಮಯವಿಲ್ಲವಾ ಎಂದು ಬಹುಭಾಷಾ ನಟ ಪ್ರಕಾಶ್ ರೈ ಸರಕಾರವನ್ನು ಪ್ರಶ್ನಿಸಿದರು.

ನಮ್ಮ ದೇಶದಲ್ಲಿಂದು ನಮ್ಮ ಹಕ್ಕುಗಳಿಗಾಗಿ ನಾವೇ ಬೀದಿಗಿಳಿದು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಮ್ಮಿಂದ ಮತ ಪಡೆದು ಹೋದವರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದ ಅವರು, ನನ್ನ ದೇಶದ ಯುವಕರು ಕೆಲಸ ಕೊಡಿ, ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಲೆ ಕೊಡಿ ಎಂದು ಬೀದಿಗಿಳಿದು ಚಳವಳಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ. ರಾಜ್ಯದಲ್ಲಿ ಸಾವಿರಾರು ಬಿಸಿಯೂಟ ನೌಕರರು ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರ ಬೇಡಿಕೆ ಈಡೇರಿಸಲು ಇಷ್ಟು ದಿನ ಬೇಕಾಯಿತಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಮಕ್ಕಳ ಪರದಾಟ
'ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಿಸಿಯೂಟ ನೌಕರರು ನಗರದಲ್ಲಿ ಧರಣಿ ಮುಂದುವರಿಸಿರುವುದರಿಂದ ರಾಜ್ಯಾದ್ಯಂತ ಮಕ್ಕಳಿಗೆ ಅಡುಗೆ ಬಡಿಸಲು ಯಾರೂ ಇಲ್ಲದೆ ಪರದಾಡುವಂತಾಗಿತ್ತು. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು ಊಟ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ ಹಾಗೂ ಹಲವು ಕಡೆಗಳಲ್ಲಿ ಮನೆಯಿಂದಲೇ ಮಕ್ಕಳಿಗೆ ಊಟದ ಡಬ್ಬಿಗಳನ್ನು ಕಳಿಸಿಕೊಟ್ಟಿದ್ದರು’

ಸಭೆಯ ಮುಖ್ಯಾಂಶಗಳು...
-ಕನಿಷ್ಠ ವೇತನ ನೀಡಲು ಸಾಧ್ಯವಿಲ್ಲ
-ಆರೋಗ್ಯ ವಿಮೆ ವಿಚಾರದಲ್ಲಿ ಯೂನಿವರ್ಸಲ್ ಹೆಲ್ತ್ ಸ್ಕೀಮ್‌ನಲ್ಲಿ ಅವಕಾಶ
-ಪಿಂಚಣಿಗೆ ಕಾರ್ಮಿಕ ಇಲಾಖೆಯೊಂದಿಗೆ ಮಾತುಕತೆ
-ಬಜೆಟ್ ಪೂರ್ವ ಘೋಷಣೆ ಮಾಡಲು ಸಾಧ್ಯವಿಲ್ಲ
-ಆರ್ಥಿಕ ಭರವಸೆ ಕೊಟ್ಟಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News