ಉದ್ಯಾನವನದಲ್ಲಿ ಅರಳಿದ ಪುರಾಣ

Update: 2018-02-10 12:51 GMT

ಚಿಕಿಣೀಕೃತವಾಗಿಸಿದ ಮರಗಳು ವೈದ್ಯಕೀಯ, ಆಲಂಕಾರಿಕ ಅಥವಾ ಆಧ್ಯಾತ್ಮಿಕ ಮೌಲ್ಯವುಳ್ಳವುಗಳು. ಅವು ವಿವಿಧ ಆಕಾರಗಳಲ್ಲಿ ಇವೆ. ಮರಗಳು ಪಂಚತತ್ವಗಳಂತಹ ಆಧ್ಯಾತ್ಮಿಕ ವಿಷಯವನ್ನು ಪ್ರತಿನಿಧಿಸುತ್ತವೆ.

ಸಾಂಸ್ಕೃತಿಕ ನಗರಿ ಮೈಸೂರಿನ ಶುಕವನದ ಪಕ್ಕದಲ್ಲೇ ಇರುವ ಕಿಷ್ಕಿಂದಾ ಮೂಲಿಕಾ ಬೋನ್ಸಾಯ್ ಉದ್ಯಾನದಲ್ಲಿ ತುಂಬ ಜತನದಿಂದ ಬೆಳೆಸಿದ ಹಾಗೂ ಚಿಕಿಣೀಕೃತವಾಗಿಸಿದ, ಕುಬ್ಜಗೊಳಿ ಸಲಾದ (ಮಿನಿಯೇಚರೈಸ್ಡ್), ಬೋನ್ಸಾಯ್ ಎಂದು ಕರೆಯಲ್ಪಡುವ ವೃಕ್ಷಗಳಿವೆ. ಕಣ್ಣಿಗೆ ಆಕರ್ಷಕವಾಗಿ ಕಾಣಿಸುವ, ಚಿತ್ರ ಬರೆದಂತೆ ಇರುವ ಈ ಉದ್ಯಾನವನ್ನು 2005ರಲ್ಲಿ ಸಂದರ್ಶಕರಿಗೆ ತೆರೆಯಲಾಯಿತು. ಅಂದಿನಿಂದ ಅದು ಸಂದರ್ಶಕರಿಗೆ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅದು ಮೈಸೂರಿನ ಆಶ್ರಮದ ಸ್ಥಾಪಕ ಸ್ವಾಮಿ ಗಣಪತಿ ಸಚ್ಚಿದಾನಂದ ಸ್ವಾಮಿಯವರ ಕಲ್ಪನೆಯ ಕೂಸು. ಕುಡಿಕೆಗಳಲ್ಲಿರುವ ಕುಬ್ಜ ವೃಕ್ಷಗಳಿಂದ ಆವೃತವಾದ ಆವರಣದೊಳಗೆ ಕೊಳಗಳು, ತೊರೆಗಳು, ಜಲಪಾತಗಳು, ಕಾರಂಜಿಗಳು ಮತ್ತು ಪುರಾಣ ಪುರುಷರ, ಪೌರಾಣಿಕ ಪಾತ್ರಗಳ ಪ್ರತಿಮೆಗಳು ಕಣ್ಮನ ಸೆಳೆಯುತ್ತವೆ.

ಚಿಕಿಣೀಕೃತವಾಗಿಸಿದ ಮರಗಳು ವೈದ್ಯಕೀಯ, ಆಲಂಕಾರಿಕ ಅಥವಾ ಆಧ್ಯಾತ್ಮಿಕ ಮೌಲ್ಯವುಳ್ಳವುಗಳು. ಅವು ವಿವಿಧ ಆಕಾರಗಳಲ್ಲಿ ಇವೆ. ಮರಗಳು ಪಂಚತತ್ವಗಳಂತಹ ಆಧ್ಯಾತ್ಮಿಕ ವಿಷಯವನ್ನು ಪ್ರತಿನಿಧಿಸುತ್ತವೆ.

ಅಶ್ವತ್ಥ, ವಟವೃಕ್ಷ, ಬಿಲ್ವ ಮತ್ತು ಅಶೋಕ ವೃಕ್ಷಗಳು ಕುಬ್ಜಗೊಳಿಸಲಾದ ವೃಕ್ಷಗಳಲ್ಲಿ ಸೇರಿವೆ. ಕುತೂಹಲದ ಸಂಗತಿ ಎಂದರೆ ಕುಬ್ಜಗೊಳಿಸಲಾದ ಬಾಳೆಮರಗಳು ಕೂಡ ಕುಡಿಕೆಗಳಲ್ಲಿವೆ. 2016ರ ಡಿಸೆಂಬರ್ 19-22ರಂದು ಆಶ್ರಮದ ಆವರಣದಲ್ಲಿ ಒಂದು ಅಂತಾರಾಷ್ಟ್ರೀಯ ಬೋನ್ಸಾಯ್ ಅಧಿವೇಶನ ಹಾಗೂ ವಸ್ತು ಪ್ರದರ್ಶನವನ್ನು ನಡೆಸಲಾಯಿತು. ಅದರಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧರಾದ ವಿಯೆಟ್ನಾಂನ ಬೋನ್ಸಾಯ್ ಲ್ಯಾಂಡ್‌ಸ್ಕೇಪ್ ಕಲಾವಿದ ತಮ್ ತಾನ್ ನೇಗನ್, ಜಪಾನಿನ ನೇಮಿ ಇವಾಸಾಕಿ, ತೈವಾನ್‌ನ ಅಲ್ಬರ್ಟ್ ಚಾಂಗ್, ಆಸ್ಟೇಲಿಯಾದ ಗ್ಲೆನಿಸ್ ಬೆಟ್ ಮತ್ತು ಮುಂಬೈನ ನಿಕುಂಜ್ ಮೊದಲಾದವರು ಭಾಗವಹಿಸಿದ್ದರು.

ಪಕ್ಷಿಸಂಕುಲದ ಅತಿಥಿಗಳಿಗೊಂದು ಮನೆ

ಮೈಸೂರಿನ ‘ಶುಕವನ’ ಪಕ್ಷಿ ವೀಕ್ಷಕರಿಗೆ ಒಂದು ಹೊಸ ಪ್ರವಾಸಿ ತಾಣವಾಗಿ ಮೂಡಿ ಬಂದಿದೆ. ಅಚ್ಚರಿ ಹುಟ್ಟಿಸುವ ವಿವಿಧ ರೀತಿಯ ಪರಕೀತ್‌ಗಳನ್ನು ನೋಡಲು ಬಯ ಸುವವರಿಗಂತೂ ಇದೊಂದು ನೋಡ ಲೇಬೇಕಾದ ಪಕ್ಷಿಕಾಶಿ.

ಈ ಆಶ್ರಮವು ಮೈಸೂರಿನಲ್ಲಿರುವ ‘ಅತ್ಯಂತ ಬೃಹತ್ ಟ್ವಿಟರ್ ಖಾತೆ’ ತನ್ನದೆಂದು ಜಂಭ ಕೊಚ್ಚಿಕೊಳ್ಳಬಹುದು. ಆದರೆ ವರ್ಚುವಲ್ ಜಗತ್ತಿನ ಟ್ವಿಟರ್ (ಕಲರವ) ಎಂಬ ಶಬ್ದದ ನಿಜವಾದ ಅರ್ಥ ದಲ್ಲಿ. ಆಶ್ರಮದಲ್ಲಿ ಸುಮಾರು 2,200 ಪಕ್ಷಿಗಳ ಟ್ವಿಟರಟಿ ಅಂದರೆ, ಟ್ವಿಟರ್/ಕಲರವ ಮಾಡುವ, ಚಿಲಿಪಿಲಿ ಗುಟ್ಟುವ ಪಕ್ಷಿ ಸಂಕುಲ ಇದೆ. ಈ ಎಲ್ಲ ಹಕ್ಕಿಗಳೂ ಗಿಳಿಯ ಕುಟುಂಬಕ್ಕೆ ಸೇರಿದವುಗಳು. ಹಕ್ಕಿಗಳ ಚಿಲಿಪಿಲಿ, ವಿವಿಧ ರೀತಿಯ ಕೂಗುಗಳು ಬೆಳಗಿನ ವೇಳೆ ಚೆನ್ನಾಗಿ ಕೇಳಿಸುತ್ತವೆ. ಮೆಕಾವ್, ಲಾರಿಕೀಟ್ ಮತ್ತು ವೈವಿಧ್ಯಪೂರ್ಣ ಸದ್ದಿನೊಂದಿಗೆ ಉಷಃಕಾಲದ ಆಗಮನವನ್ನು ಸಾರುತ್ತವೆ. ಹಕ್ಕಿಗಳ ರೆಕ್ಕೆಗಳ ಬಡಿತದ ಸದ್ದುಗಳು ದಿನವಿಡೀ ಕೇಳಿ ಬರುತ್ತವೆ.

ಊಟಿಗೆ ಹೋಗುವ ಮಾರ್ಗದಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮವು ಸಾವಿರಾರು ಸಂದರ್ಶಕರನ್ನು ಮುಖ್ಯವಾಗಿ ಪ್ರಕೃತಿ-ಪ್ರೇಮಿಗಳನ್ನು ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸುತ್ತಿದೆ. 35 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಆಶ್ರಮದಲ್ಲಿ 469 ವಿವಿಧ ಜಾತಿಗೆ ಸೇರಿದ ಬಣ್ಣ ಬಣ್ಣದ ಹಕ್ಕಿ ಗಳು 60 ಅಡಿ ಎತ್ತರದ ಪಕ್ಷಿಧಾಮದಲ್ಲಿ ಜನರ ಮನಸೂರೆಗೊಳ್ಳುತ್ತಿವೆ. ಮನುಷ್ಯರ ಭಾವನೆಗಳಿಗೆ ಸ್ಪಂದಿಸುವ ಹಾಗೂ ತಾವು ಕೇಳಿಸಿಕೊಳ್ಳುವ ಧ್ವನಿಗಳನ್ನು, ಸದ್ದುಗಳನ್ನು ಅಣಕವಾಡುವ (ಮಿಮಿಕ್ ಮಾಡುವ) ಗಿಳಿಗಳನ್ನು ಅತ್ಯಂತ ಬುದ್ಧಿವಂತ ಹಕ್ಕಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಯಾರೋ ಒಬ್ಬರು ಗಾಯಗೊಂಡ ಒಂದು ಜೊತೆ ಮೆಕಾವ್ ಹಕ್ಕಿಗಳನ್ನು ತಂದು ಸ್ವಾಮೀಜಿಗೆ ನೀಡಿದಾಗ ಅವರಿಗೆ ಪಕ್ಷಿಧಾಮದ ಯೋಚನೆ ಬಂತು. ಆ ಹಕ್ಕಿಗಳ ಆರೈಕೆಯ ಬಳಿಕ ಅವುಗಳು ಆರೋಗ್ಯ ಪೂರ್ಣವಾದಾಗ, ಸ್ವಾಮೀಜಿ ತನ್ನ ಆಶ್ರಮದಲ್ಲಿ ಗಾಯಗೊಂಡ ಅಥವಾ ರೆಕ್ಕೆ ಮುರಿದ ಹಕ್ಕಿಗಳ ಆರೈಕೆಗಾಗಿ ಸ್ವಲ್ಪ ಜಾಗವನ್ನು ಮೀಸಲಿಟ್ಟರು. ಅದಕ್ಕೆ ‘ಶುಕವನ’ ಎಂದು ನಾಮಕರಣ ಮಾಡಲಾಯಿತು.

ಗಿಳಿಗಳು ಸಾಮಾನ್ಯವಾಗಿ 25ರಿಂದ 50 ವರ್ಷ ಗಳವರೆಗೆ ಬದುಕುತ್ತವೆ. ಇದುವರೆಗೆ ಸತ್ತ ಹಕ್ಕಿಗಳಲ್ಲಿ ಅತ್ಯಂತ ಮುದಿಯಾದ ಹಕ್ಕಿ 83 ವರ್ಷ ಬದುಕಿತ್ತು ಎನ್ನಲಾಗಿದೆ. ಈ ಜಾತಿಗೆ ಸೇರಿದ ಮೇಜರ್ ಮಿಚೆಲ್ ಕೊಕಾಟೂ ಎಂಬ ಆಸ್ಟ್ರೇಲಿಯಾದ ಹಕ್ಕಿಗಳ ತಳಿಯ ಎರಡು ಹಕ್ಕಿಗಳು ಆಶ್ರಮದಲ್ಲಿವೆ. ಅಲ್ಲದೆ, ಅಲ್ಲಿ 10ರಿಂದ 100 ಸೆ.ಮೀ. ಉದ್ದದ ರೆಕ್ಕೆಗಳಿರುವ ಮಿಲಿಟರಿ ಮೆಕಾವ್‌ಗಳಿವೆ. ಇವುಗಳು (ಕೊಕ್ಕಿನಿಂದ ಬಾಲದವರೆಗೆ) 70 ಸೆ.ಮೀ. ಉದ್ದ ಇರುತ್ತವೆ. ಅದೇನಿದ್ದರೂ ಸ್ಕಾರ್ಲೆಟ್ ಮೆಕಾವ್ ಆಶ್ರಮದಲ್ಲಿ ಎಲ್ಲರ ಕಣ್ಣುಗಳ ಆಕರ್ಷಕ ಬಿಂದು. ಸರ್ಕಸ್‌ಗಳಲ್ಲಿ ಚಿಕಣಿ ಬೈಸಿಕಲ್‌ಗಳಲ್ಲಿ ಸವಾರಿ ಮಾಡುವ ಗಿಳಿಗಳು ಇದೇ ಸ್ಕಾರ್ಲೆಟ್ ಮೆಕಾವ್‌ಗಳು.

ಪಕ್ಷಿ ಲೋಕದ ಅತಿಥಿಗಳಲ್ಲಿ ಕಾಂಗೊ ಆಫ್ರಿಕನ್ ಗ್ರೇ ಗಿಳಿಗಳು ಅತ್ಯಂತ ಬುದ್ಧಿವಂತ ಪಕ್ಷಿಗಳು ಎನ್ನುತ್ತಾರೆ. ಹಕ್ಕಿಗಳನ್ನು ಸಾಕುವವರು. ಇವುಗಳು ಸಾಮಾನ್ಯವಾಗಿ ಮನುಷ್ಯರ ಧ್ವನಿಗಳನ್ನು ಅಥವಾ ಇತರ ಸದ್ದುಗಳನ್ನು ತಾವು ಕೇಳಿಸಿಕೊಂಡ ತಕ್ಷಣವೇ ಅಣಕಿಸಬಲ್ಲವು. 50 ವರ್ಷಗಳವರೆಗೆ ಬದುಕುತ್ತವೆ ಎನ್ನಲಾದ ನೀಲಿರೆಕ್ಕೆಯ ಮೆಕಾವ್‌ಗಳು ಕಪ್ಪುಬಣ್ಣದ ರೆಕ್ಕೆ ಹೊಂದಿವೆ. ಆದರೆ ಅವುಗಳ ಗರಿಗಳ ಬಣ್ಣ ಕೆಂಪು ಅಥವಾ ಹಳದಿ.

ಸ್ಕಾರ್ಲೆಟ್ ಮೆಕಾವ್ ಮತ್ತು ಮಿಲಿಟರಿ ಮೆಕಾವ್‌ಗಳ ವಂಶಕ್ಕೆ ಸೇರಿದ ಶಮ್‌ರಾಕ್ ಮೆಕಾವ್‌ಗಳು ವಿವಿಧ ವರ್ಣಗಳಲ್ಲಿ ಕಾಣಸಿಗುತ್ತವೆ. ಹಾಗೆಯೇ ಕೆಲವು ಪಾನ್‌ಕೊಕಟೂಸ್‌ಗಳು ಕೂಡ ಸಂದರ್ಶಕರ ಮನಸೂರೆಗೊಳ್ಳುತ್ತವೆ. ಇವುಗಳ ಕೊಕ್ಕು ಎಷ್ಟೊಂದು ಬಲಿಷ್ಠವೆಂದರೆ ಇವು ತಮ್ಮ ಕೊಕ್ಕಿನಿಂದ ಜೀವಂತ ಮರಗಳ ದಪ್ಪನೆಯ ಕಡ್ಡಿಗಳನ್ನು ತುಂಡರಿಸಿ ತಮ್ಮ ಗೂಡಿಗೆ ಬೇಕಾದ ಗಾತ್ರದಲ್ಲಿ ಅವುಗಳನ್ನು ಸೀಳುತ್ತವೆ.

ಪಕ್ಷಿಧಾಮದಲ್ಲಿರುವ ಹಕ್ಕಗಳ ಯಾದಿ ತುಂಬ ಉದ್ದವಿದೆ. ಅಷ್ಟೊಂದು ಸಂಖ್ಯೆಯ ಮತ್ತು ವೈವಿಧ್ಯದ ಹಕ್ಕಿಗಳಿರುವ ಕಾರಣಕ್ಕಾಗಿ ಕಳೆದ ಮೇ ತಿಂಗಳಲ್ಲಿ ಪಕ್ಷಿಧಾಮವು ವಿಶ್ವ ದಾಖಲೆಗಳ ಗಿನ್ನೆಸ್ ಪುಸ್ತಕದಲ್ಲಿ ಸೇರ್ಪಡೆಗೊಂಡಿತ್ತು. ಇಲ್ಲಿರುವ ಪಕ್ಷಿಗಳ ಪುನರ್ವಸತಿ ಕೇಂದ್ರದಲ್ಲಿ ಪ್ರತಿದಿನ, ಸರಾಸರಿ 30ರಿಂದ 40 ಹಕ್ಕಿಗಳಿಗೆ ಪಕ್ಷಿವೈದ್ಯೆ ಡಾ.ದಾಸರಿ ಶ್ರೀ ಲಕ್ಷ್ಮೀಯವರ ಆರೈಕೆ ದೊರಕುತ್ತದೆ.

ಹಕ್ಕಿಗಳಿಗೆ ಬೀಜಗಳು, ಕಾಳುಗಳನ್ನು, ಹಣ್ಣುಗಳು ಹಾಗೂ ಸಹಿಜೋಳದ ಅದ್ದೂರಿಯ ಔತಣ ನೀಡಲಾಗುತ್ತದೆ. ಹಗಲಿನಲ್ಲಿ ಸ್ವಲ್ಪ ಮುಕ್ತವಾದ ಹಾರಾಟ ಹಾಗೂ ವ್ಯಾಯಾಮಕ್ಕಾಗಿ ಹಕ್ಕಿಗಳನ್ನು ಅವುಗಳ ಗೂಡಿನಿಂದ ಹೊರಬಿಡಲಾಗುತ್ತದೆ. ಕುತೂಹಲವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ತಾವಾಗಿಯೇ ಗೂಡಿಗೆ ಮರಳಿ ಬರುತ್ತವೆ. ದಾರಿ ತಪ್ಪಿದವುಗಳನ್ನು ಸಿಬ್ಬಂದಿ ಗೂಡಿಗೆ ಮರಳಿಸುತ್ತಾರೆ. ಪಕ್ಷಿಧಾಮವು ವಿದ್ಯಾರ್ಥಿಗಳಿಗೆ ಹಾಗೂ ಪ್ರಕೃತಿ ಪ್ರೇಮಿಗಳಿಗೆ ಒಂದು ಶಿಕ್ಷಣ ಕೇಂದ್ರವಾಗಿರುವುದರಲ್ಲಿ ಆಶ್ಚರ್ಯವಿಲ್ಲ.

Writer - ಎಂ.ಎ. ಸಿರಾಜ್

contributor

Editor - ಎಂ.ಎ. ಸಿರಾಜ್

contributor

Similar News