ಬಜೆಟ್‌ನಲ್ಲಿ ಸಾಂಸ್ಕೃತಿಕ ವಿವಿ ಘೋಷಿಸಲು ಕೋಟಿಗಾನಹಳ್ಳಿ ರಾಮಯ್ಯ ಆಗ್ರಹ
ಬೆಂಗಳೂರು, ಫೆ. 10: ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳು ‘ಅಗ್ರಹಾರ’ದ ಕಪಿಮುಷ್ಟಿಯಲ್ಲಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಕಂಡಂತೆ ರಾಜ್ಯ ಸರಕಾರ ತನ್ನ ಆಯವ್ಯಯದಲ್ಲಿ ಸಾಂಸ್ಕೃತಿಕ ವಿಶ್ವ ವಿದ್ಯಾಲಯವನ್ನು ಆರಂಭಿಸಬೇಕು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆಗ್ರಹಿಸಿದ್ದಾರೆ.
ಶನಿವಾರ ಗಾಂಧಿ ನಗರದ ಖಾಸಗಿ ಹೊಟೇಲ್‌ನಲ್ಲಿ ‘ಅಂಬೇಡ್ಕರ್‌ವಾದಿಗಳ ಗ್ರೂಪ್’ ವತಿಯಿಂದ ಏರ್ಪಡಿಸಿದ್ದ ದುಂಡುಮೇಜಿನ ಸಮ್ಮೇಳನದಲ್ಲಿ ಮಾತನಾಡಿದ ಅವರು, ದಲಿತ ಮುಖಂಡರೊಂದಿಗೆ ಸರಕಾರ ನಡೆಸುವ ಬಜೆಟ್ ಪೂರ್ವಭಾವಿ ಸಭೆ ‘ನಾರಿನಲ್ಲಿ ಕತ್ತು ಕೊಯ್ಯುವ ಕ್ರಿಯೆಯಾಗಿದೆ’ ಎಂದು ವಿಶ್ಲೇಷಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿವಿಧ ಜಾತಿಗಳಿಗೆ ಒಂದೊಂದು ಪ್ರತ್ಯೇಕ ಚೂರು-ಪಾರು ಸೌಲಭ್ಯ ಕೊಟ್ಟು ಒಡೆದು ಆಳಲಾಗಿದೆ ಎಂದು ಆರೋಪಿಸಿದ ಅವರು, ದಲಿತ-ಶೋಷಿತರ ಬಿಡುಗಡೆಗೆ ಸಾಂಸ್ಕೃತಿಕ ವಿಶ್ವ ವಿದ್ಯಾಲಯ ಅಗತ್ಯ ಎಂದು ಒತ್ತಾಯಿಸಿದರು.
‘ಸಂಘ ಪರಿವಾರದ ರಾಷ್ಟ್ರೀಯತೆ ಸಮಾಜಕ್ಕೆ ಆತಂಕಕಾರಿ ಬೆಳವಣಿಗೆ. ಅದು ಮುಸ್ಲಿಂ ವಿರೋಧಿ ಗಲಭೆಯಾದಾಗ ಮಾತ್ರ ಹುಟ್ಟುತ್ತದೆ. ಸಮಾಜದ ಎಲ್ಲ ಶೋಷಿತ ಸಮುದಾಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆ ಗಟ್ಟಿಗೊಂಡರೆ ಪರಿವಾರದ ರಾಷ್ಟ್ರೀಯತೆ ಸಾಯುತ್ತದೆ’ ಎಂದು ಹೈಕೋರ್ಟ್‌ನ ವಕೀಲ ಎಚ್.ಮೋಹನ್‌ಕುಮಾರ್ ಪ್ರತಿಪಾದಿಸಿದರು.
ಶೋಷಿತ ಸಮುದಾಯಗಳು ತಮ್ಮ ಅಸ್ಮಿತೆ ಉಳಿಸಿಕೊಳ್ಳುವುದರ ಜತೆಗೆ ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದ ಅವರು, ಶೋಷಿತ ಸಮುದಾಯಗಳ ಮಾನವ ಸಂಪನ್ಮೂಲ ವೃದ್ಧಿಯಾಗಿದೆ. ಈ ಸಂಪನ್ಮೂಲವು ಸಮುದಾಯಕ್ಕೆ ಸಿಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಆಗಬೇಕಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ವಿಚಾರಗಳು ಜನಕೇಂದ್ರಿತವಾಗಿದ್ದವು. ಆದರೆ, ಈಗಿನ ನಾಯಕರ, ಪ್ರಜ್ಞಾವಂತರೆನಿಸಿಕೊಂಡವರ ವಿಚಾರಗಳು ಅಂಬೇಡ್ಕರ್ ಕೇಂದ್ರಿತ ಆಗುತ್ತಿರುವುದು ವಿಪರ್ಯಾಸ. ಈ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಘನತೆ ಮರುಸ್ಥಾಪಿಸಲು ಬೌದ್ಧದಮ್ಮ ಮಾರ್ಗವೇ ದಿಕ್ಕು ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಪ್ರಾಧ್ಯಾಪಕ ಡಾ.ನಾರಾಯಣಸ್ವಾಮಿ, ಡಾ.ರಘುಪತಿ, ಡಾ. ಪೂರ್ಣಾನಂದ, ಲೇಖಕರಾದ ಗಂಗಾರಾಂ ಚಂಡಾಳ, ಶ್ರೀಪಾದ್‌ಭಟ್, ನಾಗಸಿದ್ಧಾರ್ಥ ಹೊಲೆಯಾರ್, ಸಿದ್ದರಾಮ ಕಾರಣಿಕ, ಮಂಗ್ಳೂರು ವಿಜಯ, ವಿ.ನಾಗರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
‘ಜನ ಸಮುದಾಯಗಳನ್ನು ಕೇಂದ್ರಿಕರಿಸಿದ್ದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ನಾವು ಅಂಬೇಡ್ಕರ್ ಆಗಬೇಕು. ಜತೆಗೆ ಅವರ ಶೂನಲ್ಲಿ ಕಾಲಿಟ್ಟು ಮುನ್ನಡೆಯಬೇಕು. ಆಗ ಮಾತ್ರವೇ ಶೋಷಿತರಿಗೆ ಸಾಮಾಜಿಕ, ಸಾಂಸ್ಕೃತಿಕ ಘನತೆ ತಂದುಕೊಡಲು ಸಾಧ್ಯ’
-ಎಚ್.ಮೋಹನ್‌ಕುಮಾರ್, ವಕೀಲರು