'ಬೆಂಕಿಯಲ್ಲೂ ಬಾಡದ ಹೂವು' ವೈಚಾರಿಕ ನೆಲೆಗಟ್ಟಿನಲ್ಲಿ ಹುಟ್ಟಿದ ಕಾವ್ಯ

Update: 2018-02-10 17:50 GMT

‘ಬೆಂಕಿಯಲ್ಲೂ ಬಾಡದ ಹೂವು’ ಸೌಮ್ಯಾ ಕೆ.ಆರ್. ಅವರ ಚೊಚ್ಚಲ ಕವನ ಸಂಕಲನ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದ ಈ ಸಂಕಲನವನ್ನು ಬೆಂಗಳೂರು ಕದಿರೇನಹಳ್ಳಿಯ ಪ್ರಬುದ್ಧ ಪ್ರಕಾಶನ ಬೆಳಕಿಗೆ ತಂದಿದೆ. ಒಟ್ಟು ಐವತ್ತೊಂದು ಕವನಗಳಿವೆ. ಎಂ.ಎಸ್. ಆಶಾದೇವಿಯವರು ಮುನ್ನುಡಿಯಲ್ಲಿ ಸೌಮ್ಯಾ ಅವರ ಕಾವ್ಯಲೋಕಕ್ಕೆ ಅರ್ಥಪೂರ್ಣವಾದ ಪ್ರವೇಶಿಕೆ ಒದಗಿಸಿದ್ದಾರೆ. ಬೆಂಕಿಯಲ್ಲೂ ಬಾಡದ ಹೆಣ್ಣಿನ ಚೈತನ್ಯವೇ ಸೌಮ್ಯಾ ಅವರನ್ನು ಕಾವ್ಯ ರಚನೆಗೆ ಪ್ರವೇಶಿಸಿದೆ’ ಎಂಬ ಅವರ ಮಾತುಗಳು ಗಮನಾರ್ಹವಾಗಿದೆ. ಓದಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಸಂವಾದ ಬಳಗದ ಅನಿತಾರತ್ನಂ ಕೆಲವು ಕವನಗಳ ಸಮೀಕ್ಷೆ ನಡೆಸಿದ್ದಾರೆ. ‘‘ಬದುಕು ಮತ್ತು ಕಾರ್ಯಕ್ಷೇತ್ರದಲ್ಲಿ ಕಂಡ ಏಳುಬೀಳುಗಳನ್ನು, ಅನೇಕ ಪ್ರಶ್ನೆಗಳನ್ನು ತಮ್ಮ ವ್ಯಕ್ತಿಗತ ಹುಡುಕಾಟದಲ್ಲಿ ಅನಾವರಣ ಮಾಡಿಕೊಳ್ಳುತ್ತಲೇ ಅನೇಕ ಹೆಣ್ದನಿಗಳಿಗೆ ಶಬ್ದವಾಗಲು ಸೌಮ್ಯಾ ಕಾರಣವಾಗಿದ್ದಾರೆ’’ ಎಂದು ಅವರು ಹೇಳಿರುವುದು ಪರಮಸತ್ಯ. ಡಾ. ಬಂಜಗೆರೆ ಜಯಪ್ರಕಾಶರ ಬೆನ್ನುಡಿ ಸೌಮ್ಯಾ ಅವರ ವ್ಯಕ್ತಿತ್ವ ಮತ್ತು ಕರ್ತೃತ್ವಕ್ಕೆ ಕನ್ನಡಿ ಹಿಡಿದಿದೆ.

ಸೌಮ್ಯಾ ಅವರಲ್ಲಿ ಕವಿತೆ ಕಟ್ಟುವ ಪ್ರತಿಭೆ ಇದೆ. ಬದುಕಿನ ಸೂಕ್ಷ್ಮ ಕಂಪನಗಳನ್ನು ಗುರುತಿಸಿ ಸಶಕ್ತ ಪದಬಂಧಗಳಲ್ಲಿ ಹಿಡಿದಿಡುವ ಶಕ್ತಿ ಇದೆ. ಚಳವಳಿಗಳೊಂದಿಗೆ ಬೆಳೆದು ಬಂದ ಅವರಿಗೆ ವೈಚಾರಿಕ ನೆಲೆಗಟ್ಟು ಇದೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಕಾಲದ ಬಗ್ಗೆ ಮರುಕವಿದೆ.

‘‘ಪಾಪಿಗಳ ಲೋಕ/ಕೈಗೆ ಸಿಕ್ಕಿದ್ದೆಲ್ಲವ ಬಾಚಿ/ಹುಂಡಿಗಿಷ್ಟು ಸುರಿದು/ಶಿವಶಿವ ಎನ್ನುವವರಿಗಿದು ಕಾಲವಯ್ಯೆ/ಕೂಲಿಕಾರ್ಮಿಕರಿಗೆಲ್ಲಿ ನ್ಯಾಯವಯ್ಯಾ’’ ಎಂದು ಪ್ರಶ್ನಿಸುವ ಕವಯಿತ್ರಿ, ಶೋಷಣೆಯ ವಿಕೃತ ಮುಖವಾಡದ ಹಿಂದಿರುವ ಕ್ರೌರ್ಯವನ್ನು ಬಯಲಿಗೆಳೆಯುತ್ತಾರೆ.

ನೆಲಕಚ್ಚಿರುವ ಮೌಲ್ಯಗಳನ್ನು ಮೇಲೆತ್ತಲು, ಅಸಹನೀಯವಾದ ಬದುಕನ್ನು ತಿಳಿಗೊಳಿಸಲು ಅವರು ಕಾವ್ಯಪ್ರಕಾರವನ್ನು ಕೈಗೆತ್ತಿಕೊಂಡಿದ್ದಾರೆ. ವೈಚಾರಿಕ ನೆಲೆಗಳು ಅಕ್ಷರ ರೂಪದಲ್ಲಿ ಬಲಗೊಂಡು ಜನಸಾಮಾನ್ಯರಿಗೆ ತಲುಪಬೇಕೆಂಬ ಉದ್ದೇಶ ಅದರ ಹಿಂದಿವೆ.

‘‘ಆಗಾಗ ಕುಕ್ಕರ್ ಶಬ್ದದಂತೆ/ಹೆಣ್ಣು ದನಿಗಳು ವಟಗುಟ್ಟುತ್ತಲೆ/ತನ್ನೆಲ್ಲ ನೋವುಗಳನ್ನು ಅಡುಗೆ ಮನೆಯ/ಸಾಸಿವೆ ಡಬ್ಬಗಳಲ್ಲಿ ಬಿಗಿದಿಟ್ಟು/ಆಗ ಮಾತ್ರ ಸಿಟ್ಟು ಸಿಡಿಯುತ್ತದೆ ಒಗ್ಗರಣೆಯಂತೆ’’ (ಅಡುಗೆ ಮನೆಯ ಹುಡುಗಿ) ಎಂಬ ಸಾಲುಗಳು ಮನಕಲಕುತ್ತದೆ. ಸಂಕಲನದ ಇನ್ನಷ್ಟು ಕವನಗಳು ಪ್ರೀತಿಯನ್ನೇ ಕೇಂದ್ರದಲ್ಲಿಟ್ಟುಕೊಂಡವುಗಳು. ‘‘ಸಾಕು ಸಾಕಾಗಿದೆ ಈ ಜಗದ ತವಕ/ಪ್ರೀತಿ ಹೊರತು ಬೇರೆ ಬೇಕಿಲ್ಲೆನಗೆ’’ (ನಿನಗೆ ನೀನೇ ಸಾರಥಿ). ಆದರೆ ಪ್ರೀತಿಯೂ ಭ್ರಮೆಯಾಗಿ ಕೆಲವೊಮ್ಮೆ ಬೇಸರ ತರಿಸಿದೆ ಎಂಬ ಸತ್ಯಾಂಶವನ್ನೂ ಅದರಲ್ಲಿ ನಿವೇದಿಸಲಾಗಿದೆ.

ಸೌಮ್ಯಾ ಅವರು ಪೌರಾಣಿಕ ಪ್ರತಿಮೆಗಳ ಮೂಲಕ ವರ್ತಮಾನವನ್ನು ಧ್ವನಿಸಿದ ರೀತಿ ಅನನ್ಯ. ಕೆಲವು ಕವನಗಳಲ್ಲಿ ರಾಮ, ರಾವಣ, ಸತಿ ಸಾವಿತ್ರಿ. ಪಂಚಪಾಂಡವರು, ಚಿತ್ರಾಂಗದೆ, ಪಾಂಚಾಲಿ, ಕೃಷ್ಣ, ಯಮ ಮೊದಲಾದ ಪಾತ್ರಗಳು ಮಾತ್ರವಲ್ಲದೆ ಶಬರಿ ಆಗಾಗ ಬರುತ್ತಾಳೆ.

ಸೌಮ್ಯಾ ಅವರು ಒಂದು ಒಳ್ಳೆಯ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಒಟ್ಟಾರೆಯಾಗಿ ರೋಚಕತೆ, ಭಾವುಕತೆ, ಚಿಂತನೆ ಇಲ್ಲಿನ ರಚನೆಗಳಲ್ಲಿದೆ. ಭಾಷೆ, ಆಶಯಗಳಿಗೆ ಒಂದು ಹೊಸ ಆಕೃತಿಯನ್ನು ಕಟ್ಟುವ ಅದಮ್ಯ ಉತ್ಸಾಹ ಕವಯಿತ್ರಿಯಲ್ಲಿದೆ. ಭಾಷೆಯ ದನಿ, ಬನಿಯನ್ನು ಅವರು ಸಮರ್ಥವಾಗಿ ಬಳಸಿದ್ದಾರೆ. ಪ್ರೀತಿಯ ರೂಪು-ಸ್ಪರ್ಶ, ರುಚಿ, ಗಂಧಗಳನ್ನು ಉಪಮೆ, ರೂಪಕಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕೆಲವು ಕವನಗಳಲ್ಲಿ ಸರಳತೆ, ಸಹಜತೆ, ಗೇಯತೆಯನ್ನು ಕಾಣಬಹುದು. ಸಮಾನತೆ, ಸಹಿಷ್ಣುತೆಪರವಾದ ಕವನಗಳೂ ಇವೆ. ಮುನ್ನುಡಿಯಲ್ಲಿ ಎಂ.ಎಸ್. ಆಶಾ ದೇವಿ ಹೇಳಿರುವಂತೆ - ‘‘ಭಾಷೆ ಅಭಿವ್ಯಕ್ತಿ ಎಲ್ಲದರಲ್ಲೂ ಸೌಮ್ಯಾ ಇನ್ನೂ ಪರಿಣತಿ ಪಡೆಯಬೇಕಾಗಿದೆ. ಪ್ರಾಮಾಣಿಕತೆ ಮತ್ತು ಅದಮ್ಯ ಆಸೆ ಮಾತ್ರ ಒಳ್ಳೆಯ ಕವಯಿತ್ರಿಯನ್ನು ರೂಪಿಸಲಾರವು. ಅದಕ್ಕೆ ತಪಸ್ಸಿನಂಥ ಧ್ಯಾನ, ಕಾವ್ಯಪರಂಪರೆಯ ಅರಿವು ಮತ್ತು ಅದರೊಂದಿಗಿನ ಒಡನಾಟ, ತಾಳ್ಮೆ ಎಲ್ಲವೂ ಒಂದಕ್ಕೊಂದು ಪೂರಕವಾಗುತ್ತಾ ಹೋಗಬೇಕು’’ ಅಂತಹ ಕಾಲ ಕೂಡಿಬರಲಿ.

ಸಮಾಜದ ಮೌಢ್ಯಗಳನ್ನು ತೊಡೆದುಹಾಕುವ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಆತ್ಮೀಯ ಕವಯಿತ್ರಿ ಸೌಮ್ಯಾ ಕೆ.ಆರ್. ಅವರಿಂದ ಇನ್ನಷ್ಟು ಕೃತಿಗಳು ಬೆಳಕಿಗೆ ಬರಲಿ ಎಂದು ಹಾರೈಸುತ್ತೇನೆ.

ಸೌಮ್ಯಾ ಕೆ.ಆರ್.

Writer - ರಾಧಾಕೃಷ್ಣ ಉಳಿಯತ್ತಡ್ಕ

contributor

Editor - ರಾಧಾಕೃಷ್ಣ ಉಳಿಯತ್ತಡ್ಕ

contributor

Similar News