×
Ad

ಶ್ರೇಷ್ಟ ಕಾದಂಬರಿಗಳು ನಾಟಕ ರೂಪಕ್ಕೆ ಬರಲಿ: ಜೋಗಿ

Update: 2018-02-11 22:07 IST

ಬೆಂಗಳೂರು, ಫೆ.11: ಕಾದಂಬರಿಯಾಧಾರಿತ ನಾಟಕ ‘ಮಲೆಗಳಲ್ಲಿ ಮದುಮಗಳು’ ಕೃತಿಗೆ ಮಾತ್ರ ಸೀಮಿತವಾಗಬಾರದು. ಕನ್ನಡದ ಮತ್ತಷ್ಟು ಶ್ರೇಷ್ಟ ಕಾದಂಬರಿಗಳು ನಾಟಕ ರೂಪಕ್ಕೆ ಬರಲಿ ಎಂದು ಹಿರಿಯ ಲೇಖಕ ಜೋಗಿ ಆಶಿಸಿದ್ದಾರೆ.

ನಗರದ ಮಲ್ಲತ್ತಳ್ಳಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಷ್ಟ್ರಕವಿ ಕುವೆಂಪು ಕಾದಂಬರಿಯಾಧಾರಿತ ‘ಮಲೆಗಳಲ್ಲಿ ಮದುಮಗಳು’ ನಾಟಕದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಶ್ರೇಷ್ಟ ಕಾದಂಬರಿಗಳಲ್ಲಿರುವ ಉತ್ಕೃಷ್ಟ ಚಿಂತನೆಯನ್ನು ಜನರಿಗೆ ತಲುಪಿಸಲು ನಾಟಕ ಅತ್ಯುತ್ತಮ ವಿಧಾನವೆಂದು ಅಭಿಪ್ರಾಯಿಸಿದರು.

ನಾಟಕಗಳು ನಿರಂತರವಾಗಿರಲಿ: ಮಲೆಗಳಲ್ಲಿ ಮದುಮಗಳು ನಾಟಕವು ಸೇರಿದಂತೆ ಶ್ರೇಷ್ಟ ನಾಟಕಗಳು ಬೆಂಗಳೂರಿನಲ್ಲಿ ಪ್ರತಿದಿನ ನಡೆಯುತ್ತಿರಲಿ. ನಾಟಕ ಪ್ರದರ್ಶನವನ್ನು ನಮ್ಮ ದಿನನಿತ್ಯದ ಭಾಗವಾಗಿಸಿಕೊಳ್ಳಬೇಕು. ಇದರಿಂದ ಬೆಂಗಳೂರಿಗೆ ಬರುವ ದೇಶ, ವಿದೇಶದ ಪ್ರವಾಸಿಗರಿಗೆ ನಾಟಕದ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಜನ ಸಾಮಾನ್ಯರಲ್ಲಿ ಮಲೆಗಳಲ್ಲಿ ಮದುಮಗಳು ನಾಟಕ ಇಷ್ಟೊಂದು ಜನಪ್ರಿಗೊಂಡಿರುವುದಕ್ಕೆ ಕೃತಿಕಾರ ಕುವೆಂಪುರವರೆ ಮುಖ್ಯಕಾರಣ. ಜನತೆ ನಾಟಕದ ಕುರಿತು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿರುವುದು ನನ್ನನ್ನು ಒಳಗೊಂಡಂತೆ ನಾಟಕದ ನಿರ್ದೇಶಕರಿಗೆ, ರಂಗ ತಂತ್ರಜ್ಞರಿಗೆ, ಕಲಾವಿದರಿಗೆ ಮತ್ತಷ್ಟು ಹುರುಪನ್ನು ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಮಾತನಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಯಶಸ್ವಿಯಾಗಿ ಪ್ರದರ್ಶಗೊಂಡಿದೆ. ರಾಜ್ಯದ ಲಕ್ಷಾಂತರ ಮಂದಿ ವೀಕ್ಷಿಸಿರುವುದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಾಟಕಗಳನ್ನು ಆಯೋಜನೆ ಮಾಡಲು ವಿಶ್ವಾಸ ಮೂಡಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News