ಲಾರಿ ಢಿಕ್ಕಿ: ದ್ವಿಚಕ್ರ ಸವಾರ ಮೃತ್ಯು
ಬೆಂಗಳೂರು, ಫೆ. 11: ಶರವೇಗದಲ್ಲಿ ಸಾಗುತ್ತಿದ್ದ ಲಾರಿಯೊಂದು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಸಹ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ನಾಗವಾರ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟ ಸವಾರನನ್ನು ನಾರಾಯಣಪುರದ ನಿವಾಸಿ ಯೋಗಾನಂದ (31) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಹ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೂ ತರಲು ನಗರದ ಸಿಟಿ ಮಾರುಕಟ್ಟೆಗೆ ಬೆಳಗ್ಗೆ 6.15ರ ಸುಮಾರಿಗೆ ಮೃತ ಯೋಗಾನಂದ ಸ್ನೇಹಿತ ನವೀನ್ ಕರೆದುಕೊಂಡು ಬೈಕ್‌ನಲ್ಲಿ ತೆರಳಿದ್ದ ವೇಳೆ ನಾಗವಾರ ಮುಖ್ಯರಸ್ತೆಯ ಗೋಲ್ಡನ್ ಫಂಕ್ಷನ್ ಹಾಲ್ ಬಳಿ ಹಿಂದಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಈ ಸಂಬಂಧ ಕಾಡುಗೊಂಡನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದ ತನಿಖೆ ಕೈಗೊಂಡಿದ್ದಾರೆ.