ಅಬುಧಾಬಿಯ ರಾಜಕುಮಾರ ‘ಜೈ ಸಿಯಾ ರಾಮ್’ ಎಂದು ಹೇಳಿದರೇ?

Update: 2018-02-12 12:02 GMT

ಪ್ರಧಾನಿ ಮೋದಿಯವರ ಈ ಬಾರಿಯ ವಿದೇಶ ಪ್ರವಾಸಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಲ ರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಗೆ ಪ್ರಾಶಸ್ತ್ಯ ನೀಡಿ ಪ್ರಕಟಿಸಿದೆ. ಪ್ರಧಾನಿ ಮೋದಿಯವರ ಅಬುಧಾಬಿ ಭೇಟಿಯ ಹಿನ್ನೆಲೆಯಲ್ಲಿ ಅಲ್ಲಿಯ ರಾಜಕುಮಾರ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಜೈ ಸಿಯಾ ರಾಮ್ ಎನ್ನುತ್ತಾ ಮಾತುಗಳನ್ನು ಆರಂಭಿಸಿದರು ಎಂದು ಪ್ರಮುಖ ಸುದ್ದಿ ವಾಹಿನಿ ಟೈಮ್ಸ್ ನೌ ಟ್ವೀಟ್ ಮಾಡಿತ್ತು.

ಈ ಟ್ವೀಟ್ ಸುಮಾರು 1300 ಬಾರಿ ರಿಟ್ವೀಟ್ ಆಗಿತ್ತು. ಆದರೆ ಈ ಸುದ್ದಿ ಎಷ್ಟು ಸತ್ಯ ಎನ್ನುವುದನ್ನು altnews.in ಬಹಿರಂಗಪಡಿಸಿದೆ. ಈ ವಿಡಿಯೋವನ್ನು ಟ್ವೀಟ್ ಮಾಡುವ ಮುನ್ನ ಟೈಮ್ಸ್ ನೌ ಸತ್ಯಾಂಶ ಏನೆಂದು ಪರಿಶೀಲಿಸಿಯೇ ಇಲ್ಲ. ವಿಡಿಯೋದಲ್ಲಿ ಜೈ ಸಿಯಾ ರಾಮ್ ಎಂದು ಹೇಳುವ ವ್ಯಕ್ತಿಯನ್ನು ಶೇಖ್ ಸುಲ್ತಾನ್ ಎಂದೇ ವೇದಿಕೆಗೆ ಆಹ್ವಾನಿಸಲಾಗಿತ್ತಾದರೂ ಅವರು ಅಬುಧಾಬಿಯ ರಾಜಕುಮಾರ ಹೌದೇ ಎನ್ನುವುದನ್ನು ಪರಿಶೀಲಿಸುವ ಗೋಜಿಗೂ ಟೈಮ್ಸ್ ನೌ ಹೋಗಿಲ್ಲ.

ಅಬುಧಾಬಿಯ ರಾಜಕುಮಾರ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಟೈಮ್ಸ್ ನೌ ಹಲವು ವರದಿಗಳನ್ನು ಪ್ರಕಟಿಸಿತ್ತು. ಆದರೂ ಈ ಬಾರಿ ಸುದ್ದಿ ಪ್ರಕಟಿಸುವಾಗ ಟೈಮ್ಸ್ ನೌ ಚಾನೆಲ್ ಗೆ ಅವರ ಮುಖ ಪರಿಚಯ ಸಿಗದೇ ಇದ್ದದ್ದು ಮಾತ್ರ ವಿಪರ್ಯಾಸವಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಅಬುಧಾಬಿಯ ರಾಜಕುಮಾರನೇ ಅಲ್ಲ. ಅಬುಧಾಬಿ ರಾಜಕುಮಾರ ಹಾಗು ಪ್ರಧಾನಿ ಮೋದಿ ಜೊತೆಗಿರುವ ಚಿತ್ರ ಕೆಳಗಿದ್ದು, ‘ಜೈ ಸಿಯಾ ರಾಮ್’ ಎಂದು ಹೇಳಿದ ವ್ಯಕ್ತಿಗೂ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ.

ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ಸೌದ್ ಅಲ್ ಕಾಸಿಮಿ. ಯುಎಇ ಮೂಲದ ಅಂಕಣಗಾರ ಹಾಗು ಅರಬ್ ವ್ಯವಹಾರಗಳ ವ್ಯಾಖ್ಯಾನಕಾರರಾಗಿದ್ದಾರೆ ಇವರು. ಈ ಯಡವಟ್ಟಿನ ಬಗ್ಗೆ ಅರಿತ ಟ್ವಿಟರಿಗರು ಕೂಡಲೇ ಟೈಮ್ಸ್ ನೌಗೆ ಬಿಸಿ ಮುಟ್ಟಿಸಿದ್ದರೂ ಬುದ್ಧಿ ಕಲಿಯದ ಅದು 8 ಗಂಟೆಗಳ ಅಂತರದಲ್ಲಿ ಮತ್ತೊಮ್ಮೆ ಅದೇ ವಿಡಿಯೋವನ್ನು ರಿಟ್ವೀಟ್ ಮಾಡಿದೆ.

ಇಷ್ಟೇ ಅಲ್ಲದೆ ಇದನ್ನು ನಂಬಿದ ಹಲವು ಚಾನೆಲ್ ಗಳೂ ಸಹ ಇದೇ ಸುದ್ದಿಯನ್ನು ಪ್ರಕಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಮೋದಿಯ ಹೆಗ್ಗಳಿಕೆ ಎಂದೂ ಹೇಳಿದ್ದಾರೆ!.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News