ವಿಶ್ವದ ಪ್ರಥಮ ಸ್ವಯಂಚಾಲಿತ ಪಾಡ್ ದುಬೈಯಲ್ಲಿ ಪ್ರಾಯೋಗಿಕ ಪರೀಕ್ಷೆ

Update: 2018-02-12 10:52 GMT

ದುಬೈ, ಫೆ.12: ವಿಶ್ವದ ಪ್ರಥಮ ಸ್ವಯಂಚಾಲಿತ ಪಾಡ್ ಕಾರುಗಳ ಪ್ರಾಯೋಗಿಕ ಪರೀಕ್ಷೆಯ ಆರಂಭವು ದುಬೈಯ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ಇಲ್ಲಿ ರವಿವಾರ ನಡೆದ ವಿಶ್ವ ಸರಕಾರಿ ಶೃಂಗಸಭೆಯ ಸಂದರ್ಭ ನಡೆದಿದೆ. ನೆಕ್ಸ್ಟ್ ಫ್ಯೂಚರ್ ಟ್ರಾನ್‌ಸ್ಪೋರ್ಟೇಶನ್ ಸಹಯೋಗದೊಂದಿಗೆ ಈ ಯೋಜನೆ ಜಾರಿಯಾಗಿದೆ.

ಈ ಸ್ವಯಂಚಾಲಿತ ಪಾಡ್ ಕಾರುಗಳು ಅವುಗಳಿಗೆಂದೇ ನಿರ್ಮಿಸಲಾದ ಹಾದಿಗಳಲ್ಲಿ ಅಲ್ಪ ಮತ್ತು ಮಧ್ಯಮ ದೂರ ಪ್ರಯಾಣಿಸಲು ಅನುಕೂಲಕರವಾಗಲಿವೆ. ಅದರಲ್ಲಿ ಪ್ರಯಾಣಿಸಬಯಸುವವರು ಎಲ್ಲಿಗೆ ಹೋಗಬೇಕೆಂಬುದನ್ನು ಆಧರಿಸಿ ಅವುಗಳನ್ನು ಕೇವಲ ಐದು ಸೆಕೆಂಡುಗಳಲ್ಲಿ ಜೋಡಿಸಬಹುದು ಇಲ್ಲವೇ ಪ್ರತ್ಯೇಕಗೊಳಿಸಬಹುದಾಗಿದೆ.

ಪ್ರತಿಯೊಂದು ವಾಹನದಲ್ಲೂ ಕ್ಯಾಮರಾ ಮತ್ತು ಇಲೆಕ್ಟ್ರೋ ಮೆಕ್ಯಾನಿಕಲ್ ತಾಂತ್ರಿಕತೆಯನ್ನು ಅಳವಡಿಸಲಾಗಿದ್ದು, ಪಾಡ್ ಚಾಲೂ ಸ್ಥಿತಿಯಲ್ಲಿರುವಾಗಲೇ ಅವು ತಮ್ಮ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ.

ಪ್ರತಿಯೊಂದು ಪಾಡ್ ಸರಾಸರಿ ಪ್ರತಿ ಗಂಟೆಗೆ 20 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾಗಿದ್ದು, ಅದು 2.87 ಮೀಟರ್ ಉದ್ದ, 2.24 ಮೀಟರ್ ಅಗಲ ಹಾಗೂ 2.82 ಮೀಟರ್ ಎತ್ತರವಿದೆ. ಈ ವಾಹನದ ತೂಕ ಅಂದಾಜು 1,500 ಕೆ.ಜಿ.ಯಾಗಿದ್ದು ಅಂದಾಜು 10 ಪ್ರಯಾಣಿಕರನ್ನು ಸಾಗಿಸಬಹುದಾಗಿದೆ.

ಈ ಸ್ವಯಂಚಾಲಿತ ವಾಹನದಲ್ಲಿ ಬ್ಯಾಟರಿ ಅಳವಡಿಸಲಾಗಿದ್ದು, ಇದು ಮೂರು ಗಂಟೆ ಕಾರ್ಯಾಚರಿಸುವುದಲ್ಲದೆ, ಆರು ಗಂಟೆಗಳೊಳಗಾಗಿ ಅದನ್ನು ಮತ್ತೆ ಚಾರ್ಜ್ ಗೊಳಿಸಬಹುದಾಗಿದೆ.

ದುಬೈಯನ್ನು ವಿಶ್ವದ ಅತ್ಯಂತ ಹೆಚ್ಚು ಸ್ಮಾರ್ಟ್ ಸಿಟಿಯನ್ನಾಗಿಸುವ ಉದ್ದೇಶದಿಂದ ಈ ಸ್ವಯಂಚಾಲಿತ ಪಾಡ್ ಗಳ ಪ್ರಾಯೋಗಿಕ ಪರೀಕ್ಷೆ ದುಬೈ ದೊರೆ ಹಾಗೂ ಸಂಯಕ್ತ ಅರಬ್ ಸಂಸ್ಥಾನದ ಪ್ರಧಾನಿ ಶೇಕ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ನಿರ್ದೇಶನದನ್ವಯ ನಡೆಸಲಾಗಿದೆ.

ದುಬೈಯಲ್ಲಿ 2030ರೊಳಗಾಗಿ ಶೇ.25ರಷ್ಟು ಪ್ರಯಾಣಗಳನ್ನು ಸ್ವಯಂಚಾಲಿತಗೊಳಿಸುವ ಗುರಿ ಅಲ್ಲಿನ ಆಡಳಿತಕ್ಕಿದೆ. ದುಬೈ ಸಾರಿಗೆ ಪ್ರಾಧಿಕಾರ ಅಮೆರಿಕದ ನೆಕ್ಸ್ಟ್ ಫ್ಯೂಚರ್ ಇಂಕ್ ಜತೆ ಒಪ್ಪಂದವೊಂದನ್ನೂ ಈ ನಿಟ್ಟಿನಲ್ಲಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News