ಬೆಂಗಳೂರು: ವೇತನ ಭತ್ತೆ ಹೆಚ್ಚಳಕ್ಕೆ ಆಗ್ರಹಿಸಿ ಫೆ.15 ರಂದು ಧರಣಿ
ಬೆಂಗಳೂರು, ಫೆ.12: ಕೇಂದ್ರ ಸರಕಾರಿ ನೌಕರರಿಗೆ ಸಮಾನವಾಗಿ ರಾಜ್ಯ ಸರಕಾರಿ ನೌಕರರಿಗೆ ವೇತನ ಭತ್ತೆಗಳನ್ನು ಶಿಫಾರಸ್ಸು ಮಾಡವಲ್ಲಿ 6 ನೆ ವೇತನ ಆಯೋಗವು ವಿಫಲವಾಗಿರುವುದನ್ನು ಖಂಡಿಸಿ, ಸಮಾನ ಕೆಲಸಕ್ಕೆ-ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ವಿವಿಧ ಇಲಾಖೆಗಳ ಹಾಗೂ ವೃಂದ ಸಂಘಟನೆಗಳ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ವತಿಯಿಂದ ಫೆ.15 ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಪಿ.ಗುರುಸ್ವಾಮಿ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವದಡಿಯಲ್ಲಿ 6 ನೆ ವೇತನ ಆಯೋಗವು ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನ ಭತ್ತೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವ ಕುರಿತು ಭರವಸೆಯನ್ನು ನೀಡಲಾಗಿತ್ತು. ಆದರೆ, ಇದೀಗ ಕನಿಷ್ಠ ಭತ್ತೆಗಳನ್ನು ಸರಿಯಾಗಿ ಹೆಚ್ಚಳ ಮಾಡಲು ಮುಂದಾಗಿಲ್ಲ. ಅಂದು ನೀಡಿದ ಎಲ್ಲ ಭರವಸೆಗಳನ್ನು ಹುಸಿ ಮಾಡಲಾಗಿದೆ ಎಂದು ಆರೋಪಿಸಿದರು.
1998 ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಸಮಾನ ವೇತನ ಪಡೆದಿಲ್ಲ. ಆದುದರಿಂದಾಗಿ ಪ್ರತಿ ವರ್ಷ ರಾಜ್ಯ ಸರಕಾರಿ ನೌಕರರು 7 ಸಾವಿರ ಕೋಟಿ ರೂ.ಗಳಷ್ಟು ವೇತನ ಭತ್ಯೆ ಸೌಲಭ್ಯಗಳನ್ನು ಕಳೆದುಕೊಂಡಿದ್ದಾರೆ. ಈ ಸ್ಥಿತಿ ಮುಂದುವರಿದರೆ ಕೇಂದ್ರ ಮತ್ತು ರಾಜ್ಯ ನೌಕರರ ವೇತನ ಭತ್ತೆಗಳು ಇನ್ನಷ್ಟು ಹೆಚ್ಚುತ್ತದೆ. ಆದುದರಿಂದಾಗಿ, ಕೂಡಲೇ ರಾಜ್ಯ ಸರಕಾರ ಕೇಂದ್ರ ಸರಕಾರಿ ನೌಕರರ ಸಮಾನವಾದ ವೇತನವನ್ನು ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿ ಫೆ.15 ರಂದು ನಗರದ ಆನಂದ್‌ರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.