ಗುತ್ತಿಗೆ ಕಾರ್ಮಿಕರ ಸೇವೆಗೆ ಬೆಲೆಯೇ ಇಲ್ಲವೇ?

Update: 2018-02-12 18:48 GMT

ಮಾನ್ಯರೇ,

ನವಮಂಗಳೂರು, ಬಾಳ, ಕಾನ, ಪೆರ್ಮುದೆ, ಮೂಡಾಯಿಪದವು, ಕುತ್ತೆತ್ತೂರು, ಕಳುವಾರು, ಜೋಕಟ್ಟೆ ಇತ್ಯಾದಿ ಊರುಗಳಲ್ಲಿ ಸ್ಥಾಪನೆಯಾದ ಕೈಗಾರಿಕೆ, ಪೆಟ್ರೋಲಿಯಂ, ರಿಪೈನರಿ, ಕೆಮಿಕಲ್ ಸಂಸ್ಥೆಗಳಲ್ಲಿ ಸ್ಥಳೀಯರಿಗೆ, ಸ್ಥಳೀಯ ಗುತ್ತಿಗೆ ದಿನಕೂಲಿ ಕಾರ್ಮಿಕರಿಗೆ ನಿರಂತರವಾಗಿ ಅನ್ಯಾಯ, ತಾರತಮ್ಯಗಳು ನಡೆಯುತ್ತಿವೆ.
ಮೇಲೆ ಹೇಳಿದ ಸಂಸ್ಥೆೆಗಳಲ್ಲಿ ಸ್ಥಳೀಯರಿಗೆ ಯಾವುದೇ ನೇರ ಉದ್ಯೋಗಗಳು ದೊರಕಿಲ್ಲ. ಆದರೆ ಕೆಲವು ಸಂಸ್ಥೆಗಳು ಕೇರಳ, ತಮಿಳುನಾಡು, ನೇಪಾಳ, ಪಶ್ಚಿಮ ಬಂಗಾಲ, ರಾಜಸ್ಥಾನದಿಂದ ಬಂದಿರುವ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರಿಗೂ ನೇರ ಉದ್ಯೋಗ ನೀಡಿದೆ. ಆದರೆ ಸ್ಥಳೀಯರಿಗೆ ಮಾತ್ರ ನೇರ ಉದ್ಯೋಗದಲ್ಲಿ ಅವಕಾಶವಿಲ್ಲದೆ ಗುತ್ತಿಗೆ ಕಾರ್ಮಿಕರಾಗಿ ದುಡಿಸುತ್ತಿದೆ. ಅದರಲ್ಲೂ ಮುಸ್ಲಿಂ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲಾಗುತ್ತಿಲ್ಲ.
ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಿನಕೂಲಿಗೆ ಅವಕಾಶ ಇಲ್ಲದಿದ್ದರೂ ಸಂಬಂಧಿತ ಸಂಸ್ಥೆ, ಕಟ್ಟಡ ಹಾಗೂ ರಸ್ತೆ ಕಾಮಗಾರಿಯ ಕೂಲಿಯನ್ನು ತಾನೇ ನಿರ್ಧರಿಸಿಕೊಂಡು ಅದನ್ನು ನೀಡಿ ಕೈತೊಳೆದುಕೊಳ್ಳುತ್ತಿದೆ. ಸ್ಥಳೀಯರಿಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಸ್ಥಳೀಯ ರಾಷ್ಟ್ರೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಕಂಡೂ ಕಾಣದಂತೆ ವೌನವಹಿಸುತ್ತಿದ್ದಾರೆ. ಇವರ ವೈಫಲ್ಯವನ್ನು ಮುಚ್ಚಲು ಜನರೊಡನೆ ಜಾತಿ ಧರ್ಮಗಳ ವಿಷಬೀಜ ಬಿತ್ತಿ ತಮ್ಮ ವೋಟ್‌ಬ್ಯಾಂಕ್ ಭದ್ರಪಡಿಸುತ್ತಿದ್ದಾರೆ.
ಮೇಲೆ ಹೇಳಿದ ಕೆಲವೊಂದು ಕಡೆಗಳಲ್ಲಿ ಕೇಂದ್ರ ಸರಕಾರಿ ಸಂಸ್ಥೆಗಳಲ್ಲಿ ಕೆಲವು ಅಧಿಕಾರಿಗಳು ತಮ್ಮ ಖಾಸಗಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಮಾತ್ರ ಅವರ ವಿದ್ಯಾಭ್ಯಾಸಕ್ಕನುಗುಣವಾಗಿ ನೇರ ಉದ್ಯೋಗ ಸೃಷ್ಟಿಸಿ ಅವರಿಗೆ ಉತ್ತಮ ಸವಲತ್ತನ್ನು ಕೊಡುತ್ತಿದ್ದಾರೆ. ಆದರೆ ಉಳಿದ ಸಾವಿರಾರು ಗುತ್ತಿಗೆ ಕಾರ್ಮಿಕರನ್ನು ಮಾತ್ರ ಕಡೆಗಣಿಸಲಾಗುತ್ತದೆ. ಗುತ್ತಿಗೆ ದಿನಕೂಲಿ ಕಾರ್ಮಿಕರ ಸಂಸ್ಥೆಯ ಬಗೆಗಿನ ಸೇವಾ ನಿಷ್ಠೆಗೆ ಬೆಲೆಯೇ ಇಲ್ಲದಂತಾಗಿದೆ. ಅಂತಹ ಗುತ್ತಿಗೆ ಕಾರ್ಮಿಕರು ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ನಿಷ್ಠೆಯಿಂದ ದುಡಿದರೂ ಅವರಿಗೆ ಉದ್ಯೋಗ ಭದ್ರತೆ ಕನಸಿನ ಮಾತು.
ಆದ್ದರಿಂದ ಸಂಬಂಧ ಪಟ್ಟ ಜನಪ್ರತಿನಿಧಿಗಳು ಈ ಸಮಸ್ಯೆಯ ಬಗ್ಗೆ ಇನ್ನಾದರೂ ಗಮನಹರಿಸಿ ಗುತ್ತಿಗೆ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಟ್ಟಾರೇ?

Writer - -ಮುಹಮ್ಮದ್ ಆರೀಫ್, ಬಜಪೆ

contributor

Editor - -ಮುಹಮ್ಮದ್ ಆರೀಫ್, ಬಜಪೆ

contributor

Similar News