ಮಾಹಿತಿ ಹಕ್ಕು ಕಾಯಿದೆಯಡಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು: ರಾಜ್ಯ ಮಾಹಿತಿ ಆಯೋಗ ಸೂಚನೆ

Update: 2018-02-13 14:56 GMT

ಬೆಂಗಳೂರು, ಫೆ.13: ತೋಟಗಾರಿಕೆ ಇಲಾಖೆ ಅಂಗ ಸಂಸ್ಥೆಯಾದ ದಿ ನರ್ಸರಿಮೆನ್ ಕೋ-ಅಪರೇಟಿವ್ ಸೊಸೈಟಿ ಸಾರ್ವಜನಿಕ ಪ್ರಾಧಿಕಾರವಾಗಿದ್ದು ಸಂಸ್ಥೆಯ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ಕೇಳುವಂತಹ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗ ಸೂಚಿಸಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಕೆ. ಜಯಕುಮಾರ್ ಎಂಬವರು ಕಳೆದ 5 ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸಂಸ್ಥೆಗಳ ಜೊತೆ ಸೊಸೈಟಿ ನಡೆಸಿರುವ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು. ಆದರೆ ಸೊಸೈಟಿ ಅಧಿಕಾರಿಗಳು ತಮ್ಮ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರವಲ್ಲ. ಹೀಗಾಗಿ, ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಇದರಿಂದ ಜಯಕುಮಾರ್ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ ಆಯೋಗ ವಿಚಾರಣೆ ನಡೆಸಿ ಸೊಸೈಟಿ ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ಅಭಿಪ್ರಾಯಪಟ್ಟು ಆರ್‌ಟಿಐ ಅಡಿ ಕೇಳುವ ಮಾಹಿತಿ ನೀಡಬೇಕೆಂದು ಆಯೋಗದ ಆಯುಕ್ತ ಎಲ್. ಕೃಷ್ಣಮೂರ್ತಿ ಆದೇಶಿಸಿದ್ದಾರೆ.

ಸಂಸ್ಥೆ ಪ್ರಾರಂಭವಾದಾಗಿನಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ವಿವಿಧ ಹಂತದಲ್ಲಿ ಅನುದಾನ ಪಡೆಯಲಾಗಿದೆ. ಸರಕಾರ ಒದಗಿಸುತ್ತಿರುವ ನಿಧಿಗಳು ಹಾಗೂ ಹಣಕಾಸಿನ ನೆರವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸಂಸ್ಥೆಯು 2016-17ರ ಆರ್ಥಿಕ ವರ್ಷದಲ್ಲಿ ಸರಕಾರದಿಂದ ಸುಮಾರು 1,51,47,719 ರೂ.ಗಳನ್ನು ಅನುದಾನದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಆಡಳಿತ ಮಂಡಳಿಯ ಸದಸ್ಯರುಗಳನ್ನು ಸರಕಾರದಿಂದ ನಾಮ ನಿರ್ದೇಶನ ಮಾಡಲಾಗಿದೆ. ಸಂಘದ ಆಡಳಿತ ಮಂಡಳಿಯ ನಿರ್ದೇಶನದ ಮೇರೆಗೆ ತೋಟಗಾರಿಕೆ ಅಪರ ನಿರ್ದೇಶಕರನ್ನು ಸಂಸ್ಥೆ ಅಧ್ಯಕ್ಷರನ್ನಾಗಿಸಲಾಗಿದೆ. ಈ ಎಲ್ಲ ಅಂಶಗಳಿಂದ ಸಂಸ್ಥೆ ಸರಕಾರದ ಪ್ರಾಧಿಕಾರವಾಗಿದೆ ಎಂದು ಆಯೋಗ ಹೇಳಿದೆ.

ಜತೆಗೆ ದಿ ನರ್ಸರಿಮೆನ್ ಕೋ ಅಪರೇಟೀವ್ ಸೊಸೈಟಿಯ ಲೆಟರ್‌ಹೆಡ್‌ನ ಕೆಳಭಾಗದಲ್ಲಿ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ ಎಂದು ಮುದ್ರಿಸಲಾಗಿದೆ. ಮಾಹಿತಿ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಪತ್ರ ವ್ಯವಹಾರ ನಡೆಸಲಾಗಿದೆ. ಈ ಅಂಶಗಳನ್ನು ಪರಿಶೀಲನೆ ನಡೆಸಿದಲ್ಲಿ ಸರಕಾರದ ಅಂಗ ಸಂಸ್ಥೆಯಾಗಿದ್ದು, ಇದು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೊಸೈಟಿಯ ಲೆಕ್ಕಾಧಿಕಾರಿಯಾಗಿರುವವರು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಆ ಮೂಲಕ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ಪ್ರಶ್ನಿಸಿದಲ್ಲಿ ಸಾರ್ವಜನಿಕರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ. ಆಯೋಗದ ಆದೇಶ ಕೈ ಸೇರಿದ ಬಳಿಕ ತೋಟಗಾರಿಕೆ ಇಲಾಖೆ ಆಯುಕ್ತರು ದಿ ನರ್ಸ್‌ರಿಮೆನ್ ಕೋಪರೇಟಿವ್ ಸೊಸೈಟಿಯನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಅಧಿಸೂಚನೆ ಹೊರಡಿಸಬೇಕು. ಹಾಗೂ ಸಂಸ್ಥೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News