ಎದೆಹಾಲೂಡಿಸುವ ತಾಯಿಯ ಆಹಾರವು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Update: 2018-02-14 11:14 GMT

ತನ್ನ ಮಗುವಿಗೆ ಎದೆಹಾಲನ್ನು ಕುಡಿಸುವ ತಾಯಿಯು ಸೇವಿಸುವ ಆಹಾರವು ಹಾಲಿನಲ್ಲಿ ಸೇರಿಕೊಂಡಿರುತ್ತದೆ, ಆದರೆ ಅಲ್ಪ ಪ್ರಮಾಣದಲ್ಲಿ. ಸಾಮಾನ್ಯವಾಗಿ ಯಾವುದೇ ಆಹಾರಕ್ಕೆ ತಾಯಿಯು ಸುಲಭವಾಗಿ ಹೊಂದಿಕೊಂಡರೆ ಮಗುವೂ ಅದಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

 ಆರೋಗ್ಯವಂತ ತಾಯಿಯಲ್ಲಿ ಮಗುವಿನ ಜನನದ ಮೊದಲ ಆರು ತಿಂಗಳುಗಳಲ್ಲಿ ಪ್ರತಿದಿನ ಸುಮಾರು 500 ಮಿ.ಲೀ.ಎದೆಹಾಲು ಉತ್ಪತ್ತಿಯಾಗುತ್ತದೆ ಮತ್ತು ಇದು ಒಂದು ವರ್ಷದವರೆಗೂ ಮುಂದುವರಿಯಬಹುದು. ನಂತರ ಕ್ರಮೇಣ ಈ ಪ್ರಮಾಣ ಕಡಿಮೆ ಯಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರ ಎದೆಹಾಲಿನಲ್ಲಿ ಕೊಬ್ಬು ಮತ್ತು ವಿಟಾಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಮಗು ಇವುಗಳ ಕೊರತೆಯನ್ನು ಅನುಭವಿಸಬೇಕಾಗುತ್ತದೆ.

ಮೀನು ಮತ್ತು ಕೀಟನಾಶಕ ಸೇರಿದ ತರಕಾರಿಗಳ ಸೇವನೆಯಿಂದ ಎದೆಹಾಲಿನಲ್ಲಿ ಅವುಗಳ ಅಂಶ ಸೇರಿಕೊಂಡು ಮಗುವಿಗೆ ಸಮಸ್ಯೆಗಳನ್ನುಂಟು ಮಾಡಬಹುದು. ಮಸಾಲೆ ಭರಿತ ಆಹಾರ, ಕಾಂಡಿಮೆಂಟ್ ಮತ್ತು ಚಾಕಲೇಟ್‌ಗಳು, ಈರುಳ್ಳಿ ಮತ್ತು ಟೊಮೆಟೊ ಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ತೆಳ್ಳಗಿನ ಮಲ ವಿಸರ್ಜನೆಯಾಗಬಹುದು. ಆದರೆ ಧೂಮ್ರಪಾನ ಮತ್ತು ಮದ್ಯಪಾನ ಮಾಡುವ, ಮಾದಕ ದ್ರವ್ಯಗಳನ್ನು ಸೇವಿಸುವ ತಾಯಿಯ ಮಗುವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚುಕಡಿಮೆ ಎಲ್ಲ ಔಷಧಿಗಳು ಎದೆಹಾಲಿನಲ್ಲಿ ಸೇರಿಕೊಂಡಿರುತ್ತವೆ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ. ವೈದ್ಯಕೀಯ ಕಾರಣಗಳಿಂದಾಗಿ ತಾಯಿಯು ಆ್ಯಂಟಿ ಕೊಗ್ಯುಲಂಟ್, ಆ್ಯಂಟಿ ಕ್ಯಾನ್ಸರ್, ಆ್ಯಂಟಿ ಥೈರಾಯ್ಡಾ, ರೇಡಿಯೊಆ್ಯಕ್ಟಿವ್ ಮತ್ತು ವಿರೇಚಕ ಔಷಧಿಗಳನ್ನು ಸೇವಿಸುತ್ತಿದ್ದರೆ ಆ ಅವಧಿಯಲ್ಲಿ ಮಗುವಿಗೆ ಹಾಲೂಡಿಸುವುದನ್ನು ನಿಲ್ಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News