ರಾಜ್ಯ ಹೈಕೋರ್ಟ್ ದೇಶದಲ್ಲಿಯೇ ಅತ್ಯುತ್ತಮ: ದಿನೇಶ್ ಮಹೇಶ್ವರಿ
Update: 2018-02-14 20:57 IST
ಬೆಂಗಳೂರು, ಫೆ.14: ದೇಶದ ಹೈಕೋರ್ಟ್‌ಗಳಲ್ಲಿಯೇ ಕರ್ನಾಟಕದ ಹೈಕೋರ್ಟ್ ಅತ್ಯುತ್ತಮವಾಗಿದ್ದು, ನ್ಯಾಯಮೂರ್ತಿಗಳು ಹಾಗೂ ವಕೀಲರು ಒಟ್ಟುಗೂಡಿ ಕೆಲಸ ಮಾಡೋಣ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿದ್ದಾರೆ.
ಬುಧವಾರ ಹೈಕೋರ್ಟ್‌ನ ಕೋರ್ಟ್ ಹಾಲ್‌ಸಂಖ್ಯೆ-1ರಲ್ಲಿ ರಾಜ್ಯ ವಕೀಲರ ಪರಿಷತ್ ಆಯೋಜಿಸಿದ್ದ ನೂತನ ಸಿಜೆ ದಿನೇಶ್ ಮಹೇಶ್ವರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು, ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇನೆ. ಬುಧವಾರ ಇನ್ನೂ ಐದು ನೂತನ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದು, ಇದರಿಂದ, ನ್ಯಾಯಮೂರ್ತಿಗಳ ಸಂಖ್ಯೆ ಶೇ.50ರಷ್ಟು ಏರಿಕೆಯಾಗಲಿದೆ ಎಂದು ಹೇಳಿದರು.
ಕೋರ್ಟ್ ಕಲಾಪ ಎಂದರೆ ಕ್ರಿಕೆಟ್ ಫೀಲ್ಡ್ ಇದ್ದಂತೆ ಎಂದು ಬಣ್ಣಿಸಿದ ಅವರು, ನ್ಯಾಯಮೂರ್ತಿಗಳು ಅಂಪೈರ್ ತರಹ. ವಕೀಲರೇ ನಿಜವಾದ ಆಟಗಾರರು ಎಂದು ಹೇಳಿದರು.