×
Ad

ಒಣಮೀನಿನ ನಡುವೆ ಸಾಗಿಸುತ್ತಿದ್ದ 130 ಕೆ.ಜಿ.ಗಾಂಜಾ ವಶ: ಆರು ಮಂದಿಯ ಬಂಧನ

Update: 2018-02-14 21:08 IST

ಬೆಂಗಳೂರು, ಫೆ. 14: ಒಣಮೀನಿನ ನಡುವೆ ಗಾಂಜಾ ಸಾಗಾಟ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಸೇರಿದಂತೆ ಆರು ಮಂದಿ ಗಾಂಜಾ ಮಾರಾಟಗಾರರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 130 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಲ್ಲಿ ಕೊಳ್ಳೆಗಾಲ ತಾಲೂಕಿನ ಪುಷ್ಪಾಪುರದ ನವೀನ್ ಕುಮಾರ್(29)ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದರೆ, ಕೊತ್ತನೂರು ಮುಖ್ಯರಸ್ತೆಯ ಹರಿನಗರದ ಗೋವಿಂದ್ ರಾಜ್(29), ಯಲಚೇನಹಳ್ಳಿಯ ಬಸವರಾಜ್(28), ಕೊತ್ತನೂರಿನ ಮುಗೇಂದ್ರ ಅಲಿಯಾಸ್ ಮಹೇಂದ್ರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೆ, ಮೈಕೋ ಲೇಔಟ್ ಪೊಲೀಸರು ಬಸವಪುರದ ಜಗರ್ ಸಮನ್(30) ಹಾಗೂ ಹಿಗಲೂರಿನ ಲೋಕನಾಥ್ ಸಹನಿ(32) ಎಂಬ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದು, ಗಾಂಜಾ ಮಾರಾಟದಿಂದ ವಿಲ್ಲಾ, ಇನೋವಾ ಕಾರು ಖರೀದಿಸಿ ಲಕ್ಷಾಂತರ ರೂ. ಆದಾಯ ತೆರಿಗೆ ಪಾವತಿಸಿದ್ದ ರಾಚಪ್ಪನ ಸಹಚರನಾಗಿದ್ದ ಆರೋಪಿ ನವೀನ್ ಕುಮಾರ್, ಚಾಮರಾಜನಗರ, ಆಂಧ್ರ, ಇನ್ನಿತರ ಕಡೆಗಳಿಂದ ಗಾಂಜಾ ಖರೀದಿಸಿ ನಗರಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಕೋರಮಂಗಲದ ಸೆಂಟ್ ಜಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೋರಮಂಗಲ ಪೊಲೀಸರು, ಆರೋಪಿಯನ್ನು ಬಂಧಿಸಿ, 40 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಹುಳಿಮಾವು ಪೊಲೀಸರು ಬಂಧಿಸಿರುವ ಗೋವಿಂದ್ ರಾಜ್, ಬಸವರಾಜ್, ಮುಗೇಂದ್ರ ಅಲಿಯಾಸ್ ಮಹೇಂದ್ರನಿಂದ 75 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಪ್ರಮುಖ ಆರೋಪಿ ಗೋವಿಂದ್ ರಾಜ್ ಆಂಧ್ರದ ಡೆಂಕಣಕೋಟೆಯಿಂದ ಗಾಂಜಾವನ್ನು ಖರೀದಿಸಿ ಅದರ ವಾಸನೆ ಬೇರೆಯವರಿಗೆ ಗೊತ್ತಾಗದಂತೆ ನೋಡಿಕೊಳ್ಳಲು ಒಣಮೀನಿನ ನಡುವೆ ಇಟ್ಟುಕೊಂಡು ನಗರಕ್ಕೆ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಗಾಂಜಾವನ್ನು ಹರಿನಗರದ ಮನೆಯಲ್ಲಿಯೂ ಒಣಹಾಕಿದ್ದ ಮೀನುಗಳ ನಡುವೆ ಇಟ್ಟು ಬೇರೆಡೆಗೆ ಸಾಗಾಟ ಮಾಡುತ್ತಿದ್ದರು. ಹೊಟೇಲ್‌ನಲ್ಲಿ ಚಪಾತಿಗಳನ್ನು ಪ್ಯಾಕ್ ಮಾಡುವ ರೀತಿ ಗಾಂಜಾ ತಯಾರು ಮಾಡಿ ಗ್ರಾಹಕರಿಗೆ 200 ರಿಂದ 500 ರೂ. ಗಳಂತೆ ಮಾರಾಟ ಮಾಡುತ್ತಿದ್ದರು. ಮೊಬೈಲ್ ಮೂಲಕವೂ ಸಂಪರ್ಕಿಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬಂಧಿತ ಈ ಮೂವರಿಂದ 75 ಕೆಜಿ ಗಾಂಜಾ, ಮೂರು ಮೊಬೈಲ್, ಒಂದು ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಮೈಕೋ ಲೇಔಟ್ ಪೊಲೀಸರು ಬಂಧಿಸಿರುವ ಒರಿಸ್ಸಾ ಮೂಲದ ಬಸವಪುರದ ಜಗರ್ ಸಮನ್ ಹಾಗೂ ಹಿಗಲೂರಿನ ಲೋಕನಾಥ್ ಸಹನಿಯಿಂದ 15 ಕೆಜಿ 100 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಡಾ. ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News