ಬೆಂಗಳೂರು: ನರ್ಸ್‌ಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಧರಣಿ
ಬೆಂಗಳೂರು,ಫೆ.14: ಹೈಕೋರ್ಟ್ ಆದೇಶದಂತೆ ವೇತನ ನೀಡಬೇಕೆಂದು ಆಗ್ರಹಿಸಿ ಕಳೆದ ಆರು ತಿಂಗಳಿನಿಂದ ಕೇರಳದ ಆಲಪ್ಪಿ ಜಿಲ್ಲೆ ಚೇರತಲಿಯ ಕೆ.ಬಿ.ಎಂ ಆಸ್ಪತ್ರೆ ಮುಂಬಾಗದಲ್ಲಿ ಧರಣಿ ನಡೆಸುತ್ತಿದ್ದ ನರ್ಸ್‌ಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಮದು ಆರೋಪಿಸಿ ಹಾಗೂ ಉದ್ಯೋಗ ಭದ್ರತೆಗೆ ಒತ್ತಾಯಿಸಿ ಯುನೈಟೆಡ್ ನರ್ಸ್‌ಗಳ ಸಂಘಟನೆ ಇಂದು ಧರಣಿ ನಡೆಸಿತು.
ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಜಮಾಯಿಸಿದ್ದ ನೂರಾರು ನರ್ಸ್‌ಗಳು ಪೊಲೀಸರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಯುನೈಟೆಡ್ ನರ್ಸ್‌ಗಳ ಸಂಘಟನೆ ರಾಷ್ಟ್ರೀ ಯ ಸಂಯೋಜಕ ರಾಜೇಶ್ ಗೋಬಿ ಮಾತನಾಡಿ, ಕೆ.ಬಿ.ಎಂ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದ ನರ್ಸ್‌ಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ, ಪೊಲೀಸರ ದೌರ್ಜನ್ಯದಿಂದ ಸಂಘಟನೆಯ ಕಾರ್ಯದರ್ಶಿ ಜೀಜೋ ಎಂಬುವವರು ತೀವ್ರವಾಗಿ ಗಾಯಗೊಂಡು ಅಸ್ವಸ್ಥರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಕೇಳುವುದು ತಪ್ಪಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇತನ ತಾರತಮ್ಯ ಪ್ರಶ್ನಿಸಿದ್ದಕ್ಕೆ ಕೆಬಿಎಂ ಆಸ್ಪತ್ರೆ ಆಡಳಿತ ಮಂಡಳಿ 100ಜನ ನರ್ಸ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ. ಧರಣಿಗೆ ಅಡ್ಡಿಪಡಿಸಲು ಪೊಲೀಸರನ್ನು ಬಳಸಿ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿದ ಅವರು, ಈ ಕೂಡಲೇ ಅಮಾನತುಗೊಳಿಸಿರುವ ಸಿಬ್ಬಂದಿಯನ್ನು ಮರುನೇಮಕಾತಿ ಮಾಡಿಕೊಳ್ಳಬೇಕು. ಅಲ್ಲದೆ ಹೈಕೋರ್ಟ್ ಆದೇಶದಂತೆ ವೇತನ ನಿಗದಿ ಮಾಡಬೇಕು. ಇಲ್ಲವಾದರೆ ಶನಿವಾರದಿಂದ ಕೇರಳ ರಾಜ್ಯಾದ್ಯಂತ ನರ್ಸ್‌ಗಳು ಆಮರಣಾಂತ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯುನೈಟೆಡ್ ನರ್ಸ್‌ಗಳ ಸಂಘಟನೆ ಸದಸ್ಯರು ಸೇರಿದಂತೆ ನೂರಾರು ನರ್ಸ್‌ಗಳು ಪಾಲ್ಗೊಂಡಿದ್ದರು.